ಇಸ್ರೇಲ್ ಗೆ 3 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೆರಿಕ ಅಸ್ತು

PC:https://x.com/htTweets
ವಾಷಿಂಗ್ಟನ್: ಇಸ್ರೇಲ್ ಮತ್ತು ಹಮಾಸ್ ನಡುವೆ ಸುಧೀರ್ಘ ಕಾಲದಿಂದ ನಡೆಯುತ್ತಿರುವ ಸಂಘರ್ಷದ ನಡುವೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಗೆ 300 ಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಒಪ್ಪಿಗೆ ನೀಡಿದ್ದಾರೆ. ಅಮೆರಿಕ ಕಾಂಗ್ರೆಸ್ ನ ಪರಾಮರ್ಶೆ ಪ್ರಕ್ರಿಯೆಯನ್ನು ಅನುಸರಿಸದೇ 2000 ಪೌಂಡ್ ಬಾಂಬ್ ಗಳನ್ನು ಹಮಾಸ್ ವಿರುದ್ಧದ ಸಂಘರ್ಷದಲ್ಲಿ ಗಾಝಾದಲ್ಲಿ ಬಳಸಲು ಇಸ್ರೇಲ್ ಗೆ ಒದಗಿಸಲಾಗುತ್ತದೆ.
ಶುಕ್ರವಾರ ರಾತ್ರಿ ಕಾಂಗ್ರೆಸ್ ಗೆ ಈ ಕುರಿತ ಸರಣಿ ಅಧಿಸೂಚನೆಗಳನ್ನು ನೀಡಲಾಗಿದ್ದು, 204 ಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟಕ್ಕೆ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ಇದರಲ್ಲಿ 35,500 ಎಂಕೆ84 ಹಾಗೂ ಬಿಎಲ್ ಯು-117 ಬಾಂಬ್ ಗಳು, 4000 ಪ್ರೆಡೇಟರ್ ವಾರ್ ಹೆಡ್ ಗಳು ಸೇರಿವೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಅಮೆರಿಕದ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ತುರ್ತು ಅಗತ್ಯತೆಯನ್ನು ನಿರ್ಧರಿಸಿ ಮತ್ತು ವಿವರವಾದ ಸಮರ್ಥನೆಯನ್ನು ಪರಿಗಣಿಸಿ ಇಸ್ರೇಲ್ ಸರ್ಕಾರಕ್ಕೆ ಮೇಲಿನ ರಕ್ಷಣಾ ಸಲಕರಣೆಗಳನ್ನು ಮತ್ತು ರಕ್ಷಣಾ ಸೇವೆಗಳನ್ನು ಒದಗಿಸಲು ಕಾಂಗ್ರೆಸ್ ಪರಾಮರ್ಶೆ ಅಗತ್ಯತೆಯಿಂದ ವಿನಾಯಿತಿ ನೀಡಿದ್ದಾರೆ ಎಂದು ಇಲಾಖೆಯ ಪ್ರಕಟಣೆ ಹೇಳಿದೆ.
ಮುಂದಿನ ವರ್ಷದಿಂದ ಈ ಸಲಕರಣೆಗಳ ವಿತರಣೆ ಆರಂಭವಾಗಲಿದೆ. ಇದೇ ತಾರ್ಕಿಕತೆಯ ಆಧಾರದಲ್ಲಿ ಅಮೆರಿಕದಿಂದ ಇಸ್ರೇಲ್ ಗೆ 675.7 ದಶಲಕ್ಷ ಡಾಲರ್ ಮೌಲ್ಯದ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸಲು ರುಬಿಯೊ ಒಪ್ಪಿಗೆ ನೀಡಿದ್ದು, ಇವುಗಳ ವಿತರಣೆ 2028ರಿಂದ ಆರಂಭವಾಗಲಿದೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.