ತೈವಾನ್ ಗೆ ಯುದ್ಧಸಾಮಾಗ್ರಿ ಮಾರಾಟಕ್ಕೆ ಅಮೆರಿಕ ಅನುಮೋದನೆ
Photo: PTI
ವಾಷಿಂಗ್ಟನ್: ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ದ್ವೀಪರಾಷ್ಟ್ರಕ್ಕೆ 440 ದಶಲಕ್ಷ ಡಾಲರ್ ಮೌಲ್ಯದ ಯುದ್ಧಸಾಮಾಗ್ರಿಗಳು ಹಾಗೂ ಬಿಡಿಭಾಗಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ಅಮೆರಿಕ ಸರಕಾರ ಹೇಳಿದೆ.
332.2 ದಶಲಕ್ಷ ಪೌಂಡ್ ಮೊತ್ತದ 30 ಎಂಎಂ ಮದ್ದುಗುಂಡುಗಳು ಮತ್ತು ಸಂಬಂಧಿತ ಸಾಧನಗಳು, 108 ಮಿಲಿಯನ್ ಮೊತ್ತದ ಬಿಡಿಭಾಗ ಮತ್ತು ದುರಸ್ತಿ ಭಾಗಗಳನ್ನು ತೈವಾನ್ಗೆ ಮಾರಾಟ ಮಾಡುವುದಾಗಿ ಸಂಸತ್ತಿಗೆ ಸಲ್ಲಿಸಿದ ಅಧಿಸೂಚನೆಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಈ ಮಾರಾಟವು ತೈವಾನ್ಗೆ ವಿಶ್ವಾಸಾರ್ಹ ರಕ್ಷಣಾತ್ಮಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಈ ಪ್ರದೇಶದಲ್ಲಿ ಮೂಲ ಮಿಲಿಟರಿ ಸಮತೋಲನವನ್ನು ಬದಲಾಯಿಸುವುದಿಲ್ಲ. ತೈವಾನ್ನ ಭದ್ರತೆಯನ್ನು ಸುಧಾರಿಸಲು, ಈ ವಲಯದಲ್ಲಿ ರಾಜಕೀಯ ಸ್ಥಿರತೆ, ಮಿಲಿಟರಿ ಸಮತೋಲನ ಮತ್ತು ಆರ್ಥಿಕ ಪ್ರಗತಿಯನ್ನು ಉಳಿಸಿಕೊಳ್ಳಲು ನೆರವಾಗಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಮಾರಾಟವು ತುಲನಾತ್ಮಕವಾಗಿ ಚಿಕ್ಕದಾಗಿದೆ ಮತ್ತು ತೈವಾನ್ಗೆ ಪೂರೈಸುವ ಶಸ್ತ್ರಾಸ್ತ್ರ ಪ್ರಮಾಣ ವ್ಯಾಪ್ತಿಯನ್ನು ಮೀರುವುದಿಲ್ಲ. ಆದರೆ ಹದಗೆಟ್ಟಿರುವ ದ್ವಿಪಕ್ಷೀಯ ಸಂಬಂಧವನ್ನು ಸರಿಪಡಿಸಲು ಅಮೆರಿಕ-ಚೀನಾ ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಅಮೆರಿಕದ ಘೋಷಣೆ ಹೊರಬಿದ್ದಿದೆ.
ಸರಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಲು ಸಂಸತ್ತಿಗೆ ಅಧಿಕಾರವಿದೆ. ಆದರೆ, ತೈವಾನ್ಗೆ ನೇರವಾಗಿ ಶಸ್ತ್ರಾಸ್ತ್ರ ಒದಗಿಸಲು ಸಂಸದರು ಆಗ್ರಹಿಸುತ್ತಿರುವುದರಿಂದ ಈ ಸಾಧ್ಯತೆ ಕ್ಷೀಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.