ಅಮೆರಿಕ ಸಂಸತ್ ವಿಚಾರಣೆ ನ್ಯಾಯ ಸಮ್ಮತವಲ್ಲ; ಫೆಲೆಸ್ತೀನ್ ಅಧಿಕಾರಿಗಳ ಖಂಡನೆ
ವಾಷಿಂಗ್ಟನ್, ಸೆ.29: ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲಿಯನ್ನರ ವಿರುದ್ಧದ ಹಿಂಸಾಚಾರವನ್ನು ಫೆಲಸ್ತೀನಿಯನ್ ಪ್ರಾಧಿಕಾರ(ಪಿಎ) ಬೆಂಬಲಿಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಸಂಸತ್‍ನ ವಿಚಾರಣೆ ನ್ಯಾಯಸಮ್ಮತವಲ್ಲ ಮತ್ತು ತಪ್ಪು ದಾರಿಗೆಳೆಯುತ್ತದೆ ಎಂದು ಫೆಲಸ್ತೀನ್ ಅಧಿಕಾರಿಗಳು ಖಂಡಿಸಿದ್ದಾರೆ.
ಬುಧವಾರ ಅಮೆರಿಕ ಸಂಸತ್‍ನಲ್ಲಿ ನಡೆದ ‘ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಮಧ್ಯ ಏಶ್ಯಾಕ್ಕೆ ಸಂಬಂಧಿಸಿದ ವಿದೇಶ ವ್ಯವಹಾರಗಳ ಉಪಸಮಿತಿ'ಯ ಸಭೆಗೆ ಇಸ್ರೇಲ್ ಬೆಂಬಲಿಗರನ್ನು ಮಾತ್ರ ಆಹ್ವಾನಿಸಲಾಗಿದೆ. ಈ ಸಭೆಯಲ್ಲಿ `ಟೇಲರ್ ಫೋರ್ಸ್' ಕಾಯ್ದೆಯ ಅನುಷ್ಟಾನದ ಕುರಿತು ಚರ್ಚಿಸಲಾಗಿದೆ. 2018ರ ಈ ಕಾಯ್ದೆಯು `ಇಸ್ರೇಲ್ ಪ್ರಜೆಗಳ ಹತ್ಯೆಗೆ ಪುರಸ್ಕಾರ ನೀಡಿದ' ಕಾರಣಕ್ಕೆ ಫೆಲಸ್ತೀನ್ ಪ್ರಾಧಿಕಾರಕ್ಕೆ ಅಮೆರಿಕದ ಆರ್ಥಿಕ ನೆರವು ಒದಗಿಸುವುದನ್ನು ನಿಷೇಧಿಸಲು ಅವಕಾಶ ನೀಡುತ್ತದೆ. ಸಭೆಗೆ ಫೆಲೆಸ್ತೀನಿಯನ್ ಪ್ರತಿನಿಧಿಗಳನ್ನು ಆಹ್ವಾನಿಸದಿರುವುದು ಸಮಿತಿಯ ತಾರತಮ್ಯದ ಧೋರಣೆಗೆ ನಿದರ್ಶನವಾಗಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಟೀಕಿಸಿದ್ದಾರೆ.
ರಿಪಬ್ಲಿಕನ್ ಸಂಸದ ಜೋ ವಿಲ್ಸನ್ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ‘ಫೆಲೆಸ್ತೀನಿಯನ್ ಸರಕಾರ ಹತ್ಯೆಗೆ ಪಾವತಿ ವ್ಯವಸ್ಥೆಯನ್ನು ಕಾರ್ಯಗತಗೊಳಿಸಿದೆ. ಇದರ ಪ್ರಕಾರ ಇಸ್ರೇಲಿ ನಾಗರಿಕರನ್ನು ಹತ್ಯೆಗೈದರೆ ಫೆಲೆಸ್ತೀನೀಯರಿಗೆ ಪುರಸ್ಕಾರ ನೀಡಲಾಗುತ್ತಿದೆ' ಎಂದು ಸಮಿತಿಯು ಆರೋಪಿಸಿದೆ.
ಉಗ್ರರನ್ನು ಗೌರವಿಸುವ ಮತ್ತು ಪುರಸ್ಕರಿಸುವ ವ್ಯವಸ್ಥೆಯನ್ನು ಫೆಲೆಸ್ತೀನಿಯನ್ ಪ್ರಾಧಿಕಾರ ಬೆಂಬಲಿಸುತ್ತಿರುವುದರಿಂದ ಅದಕ್ಕೆ ನೀಡುತ್ತಿರುವ ಅಮೆರಿಕದ ಆರ್ಥಿಕ ನೆರವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಅಧ್ಯಕ್ಷ ಜೋ ಬೈಡನ್‍ರನ್ನು ಆಗ್ರಹಿಸಲಾಗಿದೆ. ಆದರೆ ಇಂತಹ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ದಾರಿ ತಪ್ಪಿಸುತ್ತದೆ. ಫೆಲೆಸ್ತೀನೀಯರಿಗೂ ಸಂಬಂಧಿಸಿದ ಇಂತಹ ಮಹತ್ವದ ವಿಚಾರಣೆಯಲ್ಲಿ ಇಸ್ರೇಲ್ ಪ್ರತಿನಿಧಿಗಳನ್ನು ಮಾತ್ರ ಆಹ್ವಾನಿಸಿರುವುದು ಸರಿಯಲ್ಲ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.
ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್‍ನ ಕೃತ್ಯದಿಂದ ಕುಟುಂಬದ ಪೋಷಕರನ್ನು ಕಳೆದುಕೊಂಡವರಿಗೆ, ಅಥವಾ ಇಸ್ರೇಲ್ ಸೇನೆಯಿಂದ ಬಂಧಿತರಾದವರಿಗೆ ಆರ್ಥಿಕ ನೆರವು ಒದಗಿಸುವಂತೆ ಫೆಲಸ್ತೀನ್ ಕಾನೂನಿನಡಿ ಕಾರ್ಯನಿರ್ವಹಿಸುವ `ನೆರವು ಪಾವತಿ ವ್ಯವಸ್ಥೆ' ಶಿಫಾರಸು ಮಾಡಿದರೆ ಅವರಿಗೆ ನೆರವು ಒದಗಿಸಲು ಸರಕಾರ ಬದ್ಧವಾಗಿರುತ್ತದೆ. ಇದು ಫೆಲೆಸ್ತೀನೀಯರಿಗೆ ಬಹಳ ಸೂಕ್ಷ್ಮ ವಿಷಯವಾಗಿದೆ. ತಮ್ಮ ದೇಶವನ್ನು ಮುಕ್ತಗೊಳಿಸಲು ಮತ್ತು ಇಸ್ರೇಲಿ ಆಕ್ರಮಣವನ್ನು ಕೊನೆಗೊಳಿಸುವ ಪ್ರಯತ್ನಕ್ಕೆ ತೊಡಕಾಗಲಿದೆ' ಎಂದು ಫೆಲೆಸ್ತೀನ್ ಪ್ರಾಧಿಕಾರ ಪ್ರತಿಕ್ರಿಯಿಸಿದೆ