ವೀಸಾ ಶುಲ್ಕ ಹೆಚ್ಚಳ: ತಡೆಯಾಜ್ಞೆಗೆ ಅಮೆರಿಕ ಕೋರ್ಟ್ ನಕಾರ

ವಾಷಿಂಗ್ಟನ್: ಎಪ್ರಿಲ್ 1ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿರುವ ವಲಸೆ ಶುಲ್ಕ ಹೆಚ್ಚಳಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕೆಂಬ ಕೋರಿಕೆಯನ್ನು ಅಮೆರಿಕದ ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ ಎಂದು ವರದಿಯಾಗಿದೆ.
ನ್ಯಾಯಾಲಯದಲ್ಲಿ ಮೊಕದ್ದಮೆ ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಪರಿಷ್ಕೃತ ಶುಲ್ಕ ವಿಧಿಸುವುದನ್ನು ಮುಂದೂಡಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದರು. ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರೂ ವ್ಯಾಜ್ಯವನ್ನು ಮುಂದುವರಿಸುವುದಾಗಿ ಹೇಳಿದೆ.
ಇಬಿ-5 ವೀಸಾ ಶುಲ್ಕ ಹಾಗೂ ಎಚ್-1ಬಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವಾಗ ಉದ್ಯೋಗದಾತರು ಪಾವತಿಸುವ ಆಶ್ರಯ ಶುಲ್ಕ ಹೆಚ್ಚಳವನ್ನು ಪ್ರಶ್ನಿಸಿ ಅಮೆರಿಕ ಮತ್ತು ಕೆನಡಾದ `ಐಟಿ ಸೇವೆಗಳ ಒಕ್ಕೂಟ' ಅರ್ಜಿ ದಾಖಲಿಸಿದೆ. ನ್ಯಾಯಾಲಯದ ಆದೇಶದಲ್ಲಿ ಒಂದು ಸಮಾಧಾನಕರ ಅಂಶವಿದೆ. ಸರಕಾರ ನಮ್ಮ ಅರ್ಜಿಯನ್ನು ವಿರೋಧಿಸಿಲ್ಲ ಮತ್ತು ವ್ಯಾಜ್ಯದಲ್ಲಿ ನಾವು ಉಲ್ಲೇಖಿಸಿರುವ ಪ್ರಮುಖ ವಾದದ ಬಗ್ಗೆ ನ್ಯಾಯಾಲಯ ಅಭಿಪ್ರಾಯ ನೀಡಿಲ್ಲ. ಆದ್ದರಿಂದ ಅಂತಿಮವಾಗಿ ಈ ವ್ಯಾಜ್ಯವನ್ನು ಗೆಲ್ಲುವ ಬಲಿಷ್ಟ ಅವಕಾಶ ನಮಗಿದೆ' ಎಂದು ಅರ್ಜಿದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಪ್ರಿಲ್ 1ರ ಬಳಿಕ ಸಲ್ಲಿಸಲಾಗುವ ಅಥವಾ ಪರಿಶೀಲನೆಗೆ ಬರುವ ಎಲ್ಲಾ ಅರ್ಜಿಗಳ ಜತೆ ಪರಿಷ್ಕೃತ ಶುಲ್ಕ ಲಗತ್ತಿಸದಿದ್ದರೆ ಅವನ್ನು ಸ್ವೀಕರಿಸುವುದಿಲ್ಲ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆ ಹೇಳಿದೆ.