ಇರಾನ್-ಪಾಕಿಸ್ತಾನ ಗ್ಯಾಸ್ ಪೈಪ್ಲೈನ್ಗೆ ಅಮೆರಿಕದ ವಿರೋಧ ; ಪಾಕಿಸ್ತಾನದ ವಿರುದ್ಧ ನಿರ್ಬಂಧದ ಎಚ್ಚರಿಕೆ
Photo : www.iranintl.com
ವಾಷಿಂಗ್ಟನ್: ಇರಾನ್-ಪಾಕಿಸ್ತಾನ ಗ್ಯಾಸ್ ಪೈಪ್ಲೈನ್ ಯೋಜನೆಯನ್ನು ಅಮೆರಿಕ ಬೆಂಬಲಿಸುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಹೇಳಿದ್ದಾರೆ.
ಈ ಪೈಪ್ಲೈನ್ ಮುಂದುವರಿಯುವುದಕ್ಕೆ ನಮ್ಮ ಬೆಂಬಲವಿಲ್ಲ. ಇರಾನ್ನೊಂದಿಗೆ ವ್ಯಾಪಾರ ಮಾಡುವುದು ನಮ್ಮ ನಿರ್ಬಂಧದ ವ್ಯಾಪ್ತಿಯಡಿ ಬರುವ ಅಪಾಯವಿರುವುದರಿಂದ ಈ ಬಗ್ಗೆ ಜಾಗರೂಕತೆಯಿಂದ ಪರಿಶೀಲಿಸುವಂತೆ ಎಲ್ಲರಿಗೂ ಸಲಹೆ ನೀಡುತ್ತೇವೆ ಎಂದು ಪಾಕ್ ವಿರುದ್ಧ ಸಂಭಾವ್ಯ ನಿರ್ಬಂಧದ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಗ್ಯಾಸ್ ಪೈಪ್ಲೈನ್ ಯೋಜನೆ ಪಾಕಿಸ್ತಾನಕ್ಕೆ ಎಷ್ಟು ಪ್ರಮುಖವಾಗಿದೆ ಎಂಬ ಬಗ್ಗೆ ಅಮೆರಿಕಕ್ಕೆ ವಿಸ್ತ್ರತವಾಗಿ ಮನವರಿಕೆ ಮಾಡಿದ್ದು ನಮಗೆ ನಿರ್ಬಂಧದಿಂದ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದೇವೆ. ತಾಂತ್ರಿಕ ಮತ್ತು ರಾಜಕೀಯ ವಾದ ಮಂಡಿಸಿ ಅಮೆರಿಕದಿಂದ ವಿನಾಯಿತಿ ಪಡೆಯಲು ಪ್ರಯತ್ನಿಸುತ್ತೇವೆ. ಪೈಪ್ಲೈನ್ ಯೋಜನೆಯ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ ಎಂದು ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಮುಸಾದಿಕ್ ಮಲಿಕ್ ಕಳೆದ ವಾರ ಹೇಳಿದ್ದರು.
2009ರಲ್ಲಿ ಈ ಯೋಜನೆಗೆ ಪಾಕ್-ಇರಾನ್ ಒಪ್ಪಂದ ಮಾಡಿಕೊಂಡಿದ್ದು 2015ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಯೋಜನೆಯ ಅನುಷ್ಠಾನ ವಿಳಂಬಗೊಂಡಿದೆ. ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ನಿರ್ಬಂಧವು ಯೋಜನೆಯ ಅನುಷ್ಠಾನಕ್ಕೆ ಅಡ್ಡಿಯಾಗಿದೆ ಎಂದು ಪಾಕಿಸ್ತಾನ ವಾದಿಸುತ್ತಿದೆ. ಆದರೆ ಇದನ್ನು ಇರಾನ್ ಒಪ್ಪಿಲ್ಲ. ತನ್ನ ಭೂಭಾಗದಲ್ಲಿ 900 ಕಿ.ಮೀ. ಪೈಪ್ಲೈನ್ ಕಾಮಗಾರಿಯನ್ನು ಇರಾನ್ ಪೂರ್ಣಗೊಳಿಸಿದೆ.
`ಪೀಸ್ ಪೈಪ್ಲೈನ್' ಎಂದು ಹೆಸರಿಸಲಾಗಿರುವ ಗ್ಯಾಸ್ ಪೈಪ್ಲೈನ್ ಯೋಜನೆಯಡಿ ಇರಾನ್ನಿಂದ ಪಾಕಿಸ್ತಾನಕ್ಕೆ ನೈಸರ್ಗಿಕ ಅನಿಲವನ್ನು ಸಾಗಿಸಲಾಗುತ್ತದೆ. ಒಪ್ಪಂದದ ಪ್ರಕಾರ ಪಾಕಿಸ್ತಾನ ತನ್ನ ನೆಲದಲ್ಲಿ ಪೈಪ್ಲೈನ್ ಹಾಕದಿರುವುದನ್ನು ಪ್ರಶ್ನಿಸಿ ಜನವರಿಯಲ್ಲಿ ಇರಾನ್ ಪಾಕಿಸ್ತಾನಕ್ಕೆ ಮೂರನೇ ನೋಟಿಸ್ ನೀಡಿತ್ತು. ಇದೀಗ ಒಪ್ಪಂದ ಉಲ್ಲಂಘನೆಯ ಕಾರಣಕ್ಕೆ 18 ಶತಕೋಟಿ ಡಾಲರ್ ಪರಿಹಾರ ಕೋರಿ ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. 2023ರ ಆಗಸ್ಟ್ನಲ್ಲಿ ಪಾಕಿಸ್ತಾನವು ಇರಾನ್ ಜತೆ 5 ವರ್ಷದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು ಇದನ್ನೂ ಅಮೆರಿಕ ಆಕ್ಷೇಪಿಸಿದೆ.