ಪರಮಾಣು ಕಾರ್ಯಕ್ರಮ: ಇರಾನ್-ಅಮೆರಿಕ ಪರೋಕ್ಷ ಮಾತುಕತೆ ಒಮನ್ ನಲ್ಲಿ ಆರಂಭ

Photo Credit: AP
ಮಸ್ಕತ್: ಇರಾನ್ ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಇರಾನ್ ನಡುವೆ ಒಮಾನ್ ರಾಜಧಾನಿ ಮಸ್ಕತ್ನಲ್ಲಿ ಉನ್ನತ ಮಟ್ಟದ ಪರೋಕ್ಷ ಮಾತುಕತೆ ಶನಿವಾರ ಪ್ರಾರಂಭಗೊಂಡಿದೆ.
ಮಾತುಕತೆಯಲ್ಲಿ ಹೊಸ ಒಪ್ಪಂದ ಸಾಧ್ಯವಾಗದಿದ್ದರೆ ಮಿಲಿಟರಿ ಕ್ರಮ ಅನಿವಾರ್ಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯ ನಡುವೆಯೇ ಮಾತುಕತೆ ನಡೆಯುತ್ತಿದೆ. ನೇರ ಮಾತುಕತೆ ನಡೆಯಬೇಕು ಎಂದು ಅಮೆರಿಕ ಆಗ್ರಹಿಸಿದ್ದರೂ ಮಧ್ಯವರ್ತಿಯ ಮೂಲಕ ಎರಡೂ ನಿಯೋಗಗಳು ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ.
ಮಸ್ಕತ್ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ನಿಯೋಗ ಪಾಲ್ಗೊಂಡಿದೆ.
ಮಾತುಕತೆ ಆರಂಭಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅರಾಘ್ಚಿ, ತಮ್ಮ ದೇಶವು ಅಮೆರಿಕದೊಂದಿಗೆ ನ್ಯಾಯಯುತ ಮತ್ತು ಗೌರವಾನ್ವಿತ ಒಪ್ಪಂದವನ್ನು ಬಯಸುತ್ತದೆ . ಸಮಾನ ಸ್ಥಾನದಿಂದ ನ್ಯಾಯಯುತ ಮತ್ತು ಗೌರವಾನ್ವಿತ ಒಪ್ಪಂದವನ್ನು ತಲುಪುವುದು ನಮ್ಮ ಉದ್ದೇಶ. ಇನ್ನೊಂದು ಕಡೆಯವರೂ ಇದೇ ಉದ್ದೇಶದಿಂದ ಬಂದರೆ ಆರಂಭಿಕ ತಿಳುವಳಿಕೆಗೆ ಅವಕಾಶವಿರುತ್ತದೆ ಮತ್ತು ಅದು ಮಾತುಕತೆಯ ಮಾರ್ಗವನ್ನು ಮುನ್ನಡೆಸಲಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಮಾತುಕತೆ ಆರಂಭಕ್ಕೂ ಮುನ್ನ ವಾಷಿಂಗ್ಟನ್ ನಲ್ಲಿ ವರದಿಗಾರರ ಜೊತೆ ಮಾತನಾಡಿದ ಟ್ರಂಪ್ `ಇರಾನ್ ಅದ್ಭುತ, ಶ್ರೇಷ್ಠ, ಸಂತೋಷದ ದೇಶವಾಗಬೇಕೆಂದು ನಾನು ಬಯಸುತ್ತೇನೆ. ಆದರೆ ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ' ಎಂದು ಹೇಳಿದರು.
ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸಂಪೂರ್ಣ ತ್ಯಜಿಸಬೇಕೆಂಬ ಆಗ್ರಹದೊಂದಿಗೆ ನಮ್ಮ ನಿಲುವನ್ನು ಪ್ರಸ್ತುತಪಡಿಸಲಾಗುತ್ತದೆ. ಆದರೆ ಇದರರ್ಥ ನಾವು ಹೊಂದಾಣಿಕೆಗೆ ಸಿದ್ಧವಿಲ್ಲ ಎಂದಲ್ಲ. ಪರಮಾಣು ಶಸ್ತ್ರಾಸ್ತ್ರ ಉತ್ಪಾದನೆಗೆ ಪರಮಾಣು ಕಾರ್ಯಕ್ರಮ ಬಳಕೆಯಾಗಬಾರದು ಎಂಬುದು ನಮ್ಮ ಕೆಂಪು ಗೆರೆಯಾಗಿದೆ ಎಂದು ಸ್ಟೀವ್ ವಿಟ್ಕಾಫ್ ರನ್ನು ಉಲ್ಲೇಖಿಸಿ `ವಾಲ್ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.