ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುವ ಟ್ರಂಪ್ ಸರಕಾರದ ಆದೇಶಕ್ಕೆ ನ್ಯಾಯಾಧೀಶರಿಂದ ತಾತ್ಕಾಲಿಕ ತಡೆ

ಡೊನಾಲ್ಡ್ ಟ್ರಂಪ್ (PTI)
ವಾಶಿಂಗ್ಟನ್ : ಇತ್ತೀಚೆಗೆ ನೇಮಕಗೊಂಡ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುವಂತೆ ಫೆಡರಲ್ ಏಜೆನ್ಸಿಗಳಿಗೆ ನಿರ್ದೇಶಿಸಿದ ಡೊನಾಲ್ಡ್ ಟ್ರಂಪ್ ಸರಕಾರದ ಆದೇಶಕ್ಕೆ ಯುಎಸ್ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶವನ್ನು ಹೊರಡಿಸಿದ್ದಾರೆ ಎಂದು Reuters ವರದಿ ಮಾಡಿದೆ.
ಸಾಮಾನ್ಯವಾಗಿ ಒಂದು ವರ್ಷಕ್ಕಿಂತ ಕಡಿಮೆ ಅನುಭವ ಹೊಂದಿರುವ ಪ್ರೊಬೇಷನರಿ ಉದ್ಯೋಗಿಗಳು ಸೇರಿದಂತೆ ಯಾವುದೇ ಉದ್ಯೋಗಿಗಳನ್ನು ವಜಾಗೊಳಿಸುವಂತೆ ಸರಕಾರಿ ಏಜೆನ್ಸಿಗಳಿಗೆ ಆದೇಶ ನೀಡುವ ಅಧಿಕಾರ ʼಅಮೆರಿಕದ ಸಿಬ್ಬಂದಿ ನಿರ್ವಹಣೆʼ ಇಲಾಖೆಗೆ ಇಲ್ಲ ಎಂದು ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲಾ ನ್ಯಾಯಾಧೀಶ ವಿಲಿಯಂ ಅಲ್ಸುಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಸರಕಾರದ ದಕ್ಷತೆಯ ಇಲಾಖೆ (DOGE) ಮುಖ್ಯಸ್ಥರಾಗಿರುವ ಉದ್ಯಮಿ ಎಲಾನ್ ಮಸ್ಕ್ ಅವರು ಆಡಳಿತ ವೆಚ್ಚವನ್ನು ಕಡಿತಗೊಳಿಸಲು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಸ್ಯಾನ್ ಫ್ರಾನ್ಸಿಸ್ಕೋದ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.
ತರಬೇತಿ ನಿರತ ಸಿಬ್ಬಂದಿಗಳು ನಮ್ಮ ಸರಕಾರದ ಜೀವಾಳ, ಸಿಬ್ಬಂದಿ ನಿರ್ವಹಣೆ ಇಲಾಖೆಯ ಅಧಿಕಾರಿಗಳಿಗೆ ಜನವರಿ 20ರಂದು ನೀಡಲಾದ ಸೂಚನೆ ಮತ್ತು ಫೆಬ್ರವರಿ 14ರಿಂದ ಉದ್ಯೋಗಿಗಳಿಗೆ ಇದಕ್ಕೆ ಸಂಬಂಧಿಸಿ ಕಳುಹಿಸಿರುವ ಇಮೇಲ್ ಅನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿರುವುದಾಗಿ ನ್ಯಾಯಾಧೀಶ ಅಲ್ಸುಪ್ ಅವರು ಹೇಳಿದ್ದಾರೆ.
ʼನೌಕರರ ಸಂಘಗಳ ಕಾನೂನುʼಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಶುಕ್ರವಾರ ರಕ್ಷಣಾ ಇಲಾಖೆಯು 5,400 ಪ್ರೊಬೇಷನರಿ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿತ್ತು. ಆದರೆ, ಅವರ ಇಮೇಲ್ ಮತ್ತು ಸೂಚನೆ ಅಮಾನ್ಯವಾಗಿದೆ ಎಂದು ರಕ್ಷಣಾ ಇಲಾಖೆಗೆ ತಿಳಿಸುವಂತೆ ನ್ಯಾಯಾಧೀಶರು ಹೇಳಿದ್ದಾರೆ.