ರಫಾದ ಮೇಲೆ ದಾಳಿಯ ಯೋಜನೆಗೆ ಅಮೆರಿಕದ ವಿರೋಧ
Image Source : PTI
ಕೈರೊ : ದಕ್ಷಿಣ ಗಾಝಾದ ರಫಾ ನಗರದ ಮೇಲೆ ಪದಾತಿ ದಳದ ದಾಳಿ ನಡೆಸುವ ಇಸ್ರೇಲ್ ಯೋಜನೆ ಸರಿಯಲ್ಲ ಮತ್ತು ಹಮಾಸ್ ಸೋಲಿಸಲು ಈ ದಾಳಿಯ ಅಗತ್ಯವಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕದ ನಡುವಿನ ಸಂಬಂಧಗಳು ಹದಗೆಡುತ್ತಿವೆ ಎಂಬ ವರದಿಗೆ ಪುಷ್ಟಿ ನೀಡುವ ರೀತಿ ಹೇಳಿಕೆ ನೀಡಿರುವ ಬ್ಲಿಂಕೆನ್ ` ರಫಾದಲ್ಲಿ ಪ್ರಮುಖ ಮಿಲಿಟರಿ ಕಾರ್ಯಾಚರಣೆಯ ಯೋಜನೆ ತಪ್ಪು ಮತ್ತು ಇದಕ್ಕೆ ನಮ್ಮ ಬೆಂಬಲವಿಲ್ಲ. ಹಮಾಸ್ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ, ಆದರೆ ಈ ದಾಳಿಯ ಅಗತ್ಯವಿಲ್ಲ. ಬೃಹತ್ ದಾಳಿ ಎಂದರೆ ನಾಗರಿಕರ ಸಾವು-ನೋವಿನಲ್ಲಿ ಹೆಚ್ಚಳವಾಗಲಿದೆ ಮತ್ತು ಗಾಝಾದ ಮಾನವೀಯ ಬಿಕ್ಕಟ್ಟಿನ ಉಲ್ಬಣವಾಗುತ್ತದೆ. ಇದರ ಬದಲು ಪರ್ಯಾಯ ಯೋಜನೆಯನ್ನು ಇಸ್ರೇಲ್ ರೂಪಿಸಬೇಕು' ಎಂದು ಈಜಿಪ್ಟ್ ರಾಜಧಾನಿ ಕೈರೊದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಬ್ಲಿಂಕೆನ್ ಹೇಳಿದ್ದಾರೆ. ಗಾಝಾದಲ್ಲಿ ಕದನ ವಿರಾಮ ಮತ್ತು ಸಂಘರ್ಷ ಅಂತ್ಯಗೊಂಡ ಬಳಿಕ ಗಾಝಾದ ಆಡಳಿತ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಮಧ್ಯಪ್ರಾಚ್ಯ ಪ್ರವಾಸದಲ್ಲಿರುವ ಬ್ಲಿಂಕನ್ ಕೈರೋದಲ್ಲಿ ಉನ್ನತ ಅರಬ್ ರಾಜತಾಂತ್ರಿಕರ ಜತೆ ಸಮಾಲೋಚನೆ ನಡೆಸಿದ್ದಾರೆ.