ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ: ನಿಕ್ಕಿ ಹ್ಯಾಲಿಗೆ ಹಿನ್ನಡೆ
Photo: twitter.com/NikkiHaley
ಕ್ಯಾಲಿಫೋರ್ನಿಯಾ: ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ನಿಕ್ಕಿ ಹ್ಯಾಲಿ ತಮ್ಮ ತವರು ರಾಜ್ಯದಲ್ಲೇ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಸೌತ್ ಕ್ಯಾಲಿಫೋರ್ನಿಯಾದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಯಶಾಲಿಯಾಗುವ ಮೂಲಕ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಿಕ್ಕಿ ಹಾಲೆ ರೇಸ್ ನಲ್ಲಿ ಮುಂದುವರಿಯುವ ಬಗ್ಗೆ ಸಂದೇಹಗಳು ಮೂಡಿವೆ.
ಶನಿವಾರ ರಾತ್ರಿ 7 ಗಂಟೆಗೆ ಚುನಾವಣೆ ಮುಗಿಯುತ್ತಿದ್ದಂತೆ ಸಿಎನ್ಎನ್, ಅಸೋಸಿಯೇಟೆಡ್ ಪ್ರೆಸ್ ಮತ್ತು ಎನ್ ಬಿಸಿ, ಟ್ರಂಪ್ ಅವರ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದವು. ಚುನಾವಣೆಯಲ್ಲಿ ಟ್ರಂಪ್ ದೊಡ್ಡ ಅಂತರದ ಮುನ್ನಡೆಯಲ್ಲಿರುವುದರಿಂದ ಈ ಫಲಿತಾಂಶಗಳು ಅಚ್ಚರಿಯೇನಲ್ಲ. ಅಧ್ಯಕ್ಷೀಯ ಅಭ್ಯರ್ಥಿಯ ಆಯ್ಕೆ ರೇಸ್ ಈಗಾಗಲೇ ಕೊನೆಗೊಂಡಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಚುನಾವಣೆ ನಡೆದ ಎಲ್ಲ ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಟ್ರಂಪ್, ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳುವ ಹಾದಿಯಲ್ಲಿದ್ದಾರೆ.
"ನಾವು ಇದನ್ನು ನಿರೀಕ್ಷಿಸಿದ್ದೆವು; ಆದರೆ ಇಷ್ಟೊಂದು ಶೀಘ್ರವಾಗಿ ಅಲ್ಲ" ಎಂದು ಕೊಲಂಬಿಯಾ ಎಸ್.ಸಿ.ಯಲ್ಲಿ ಮಾತನಾಡಿದ ಟ್ರಂಪ್ ಹೇಳಿದ್ದಾರೆ. ಈ ಹಿಂದೆಂದಿಗಿಂತಲೂ ರಿಪಬ್ಲಿಕನ್ ಪಕ್ಷ ಹೆಚ್ಚು ಸಂಘಟಿತವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
2016ರಿಂದಲೂ ಟ್ರಂಪ್ ಸೌತ್ ಕ್ಯಾಲಿಫೋರ್ನಿಯಾದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಹೊಂದಿದ್ದು, ರಾಜ್ಯದ ಗವರ್ನರ್ ಮತ್ತು ಟ್ರಂಪ್ ಆಡಳಿತದಲ್ಲಿ ವಿಶ್ವಸಂಸ್ಥೆ ರಾಯಭಾರಿಯಾಗಿದ್ದ ಹ್ಯಾಲಿ ಅವರನ್ನು ಸುಲಭವಾಗಿ ಮಣಿಸಿದರು.
ಪ್ರಾಥಮಿಕ ಸುತ್ತಿನ ಈ ಸ್ಪರ್ಧೆ ಅತ್ಯಂತ ಮಹತ್ವದ್ದಾಗಿದ್ದು, 2017ರವರೆಗೂ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದ ತಮ್ಮ ತವರು ರಾಜ್ಯದಲ್ಲಿ ಹ್ಯಾಲಿ, ಟ್ರಂಪ್ ಗಿಂತ 36 ಕಡಿಮೆ ಅಂಕಗಳನ್ನು ಪಡೆದು ಸೋಲು ಒಪ್ಪಿಕೊಂಡರು. ಈ ಸೋಲು ಅವರ ರಾಜಕೀಯ ಆಕಾಂಕ್ಷೆಗಳಿಗೆ ದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ರೇಸ್ ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹ್ಯಾಲಿ ಅವರು ಸ್ಪಷ್ಟಪಡಿಸಿದ್ದಾರೆ.