ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ಗೆ ಆರಂಭಿಕ ಮುನ್ನಡೆ
PC: x.com/DramaAlert
ವಾಷಿಂಗ್ಟನ್: ಇಡೀ ವಿಶ್ವದ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಟ್ರಂಪ್ 101 ಕಡೆಗಳಲ್ಲಿ ಮುನ್ನಡೆಯಲ್ಲಿದ್ದರೆ, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ 52 ಕಡೆಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಹುಮತಕ್ಕೆ 270 ಕ್ಷೇತ್ರಗಳನ್ನು ಗೆಲ್ಲುವ ಅಗತ್ಯವಿದೆ. 538 ಕ್ಷೇತ್ರಗಳ ಪೈಕಿ 130 ಕ್ಷೇತ್ರಗಳ ಮುನ್ನಡೆ ಅಂಕಿ ಅಂಶ ಲಭ್ಯವಿದೆ.
ಅಧ್ಯಕ್ಷೀಯ ಚುನಾವಣೆಯನ್ನು ಹೊರತುಪಡಿಸಿ ಸೆನೆಟ್ ನಲ್ಲಿ ಡೆಮಾಕ್ರಟಿಕ್ ಪಕ್ಷ 34 ಹಾಗೂ ರಿಪಬ್ಲಿಕನ್ ಪಕ್ಷ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜನ ಪ್ರತಿನಿಧಿ ಸಭೆಯಲ್ಲಿ ರಿಪಬ್ಲಿಕನ್ನರು 36-18 ಮುನ್ನಡೆಯಲ್ಲಿದ್ದರೆ, ಗವರ್ನರ್ ಗಳಾಗಿ 20 ಮಂದಿ ಡೆಮಾಕ್ರಟಿಕ್ ಸದಸ್ಯರು ಹಾಗೂ 22 ಮಂದಿ ರಿಪಬ್ಲಿಕನ್ ಸದಸ್ಯರು ವಿಜಯದ ಹಾದಿಯಲ್ಲಿದ್ದಾರೆ.
ಟ್ರಂಪ್ ಈಗಾಗಲೇ ಇಂಡಿಯಾನಾ, ಕೆಂಟುಕಿ ಹಾಗೂ ಪಶ್ಚಿಮ ವರ್ಜೀನಿಯಾ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕಮಲಾ ಹ್ಯಾರಿಸ್ ವೆರ್ಮೋಂಟ್ ನಲ್ಲಿ ಜಯ ಸಾಧಿಸಿದ್ದಾರೆ. ಸಮೀಕ್ಷೆಗಳ ಪ್ರಕಾರ ಇಬ್ಬರ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ದೇಶಾದ್ಯಂತ ಮತಗಳ ಎಣಿಕೆ ಪ್ರಗತಿಯಲ್ಲಿದ್ದರೂ, ಅಂತಿಮ ಫಲಿತಾಂಶಗಳು ಲಭ್ಯವಿಲ್ಲ. ಪ್ರಮುಖ ಕ್ಷೇತ್ರಗಳಲ್ಲೊಂದಾದ ಪೆನ್ಸಿಲ್ವೇನಿಯಾದಲ್ಲಿ ಕಮಲಾ ಹ್ಯಾರಿಸ್ ಕೂದಲೆಳೆ ಅಂತರದ ಮುನ್ನಡೆ ಸಾಧಿಸಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಅರಿಝೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ನಾರ್ತ್ ಕರೋಲಿನಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಿನ್ಸನ್ ರಾಜ್ಯಗಳ ಫಲಿತಾಂಶ ಅಮೆರಿಕದ 47ನೇ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಮಧ್ಯೆ ಫಿಲಿಡೆಲ್ಫಿಯಾ ಮತ್ತು ಡೆಟ್ರಾಯಿಟ್ ನಲ್ಲಿ ವ್ಯಾಪಕ ವಂಚನೆ ನಡೆದಿದೆ ಎಂದು ಟ್ರಂಪ್ ಆಪಾದಿಸಿದ್ದಾರೆ. 2020ರ ಚುನಾವಣೆಯಲ್ಲೂ ಟ್ರಂಪ್ ಈ ಆರೋಪ ಮಾಡಿದ್ದರು. ಫ್ಲೋರಿಡಾದಲ್ಲಿ ಡೆಮಾಕ್ರಟಿಕ್ ಪ್ರತಿನಿಧಿ ಮ್ಯಾಕ್ಸ್ವೆಲ್ ಫ್ರೋಸ್ಟ್ 2ನೇ ಅವಧಿಗೆ ಅಮೆರಿಕದ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ. ವೆರ್ಮೋಂಟ್ ನಲ್ಲಿ ಬೆರ್ನ್ ಸ್ಯಾಂಡರ್ಸ್ ನಾಲ್ಕನೇ ಬಾರಿಗೆ ಅಮೆರಿಕ ಸೆನೆಟ್ ಸದಸ್ಯರಾಗಿ ಆರಿಸಿ ಬಂದಿದ್ದಾರೆ. ಇವರು 2016 ಮತ್ತು 2020ರ ಅಧ್ಯಕ್ಷೀಯ ಅಭ್ಯರ್ಥಿ ರೇಸ್ ನಲ್ಲಿದ್ದರು. ಈ ಬಾರಿ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ಸೂಚಿಸಿದ್ದರು.