ಅಮೆರಿಕ ನಿರ್ಮಿತ ತಾತ್ಕಾಲಿಕ ದಕ್ಕೆ ದುರಸ್ತಿ: ಗಾಝಾಕ್ಕೆ ನೆರವು ಪೂರೈಕೆ ಪುನರಾರಂಭ
PC : deccanherald.com
ವಾಶಿಂಗ್ಟನ್, ಜೂ.9: ಗಾಝಾ ಬಂದರಿನ ಬಳಿ ಅಮೆರಿಕ ನಿರ್ಮಿಸಿದ್ದ ತಾತ್ಕಾಲಿಕ ಹಡಗುಕಟ್ಟೆ(ದಕ್ಕೆ)ಯ ದುರಸ್ತಿಕಾರ್ಯ ಅಂತ್ಯಗೊಂಡಿದ್ದು ಶನಿವಾರದಿಂದ ಗಾಝಾ ಪಟ್ಟಿಗೆ ನೆರವು ಪೂರೈಕೆ ಪುನರಾರಂಭಗೊಂಡಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಮೇ 25ರಂದು ಸುಂಟರಗಾಳಿ ಮತ್ತು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಡಗುಕಟ್ಟೆ ಹಾನಿಗೊಂಡಿದ್ದು ಅಮೆರಿಕದ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಹಾನಿಗೊಂಡ ಭಾಗವನ್ನು ಇಸ್ರೇಲ್ ಬಂದರಿಗೆ ಕೊಂಡೊಯ್ದು ದುರಸ್ತಿಗೊಳಿಸಿದ ಬಳಿಕ ಮರು ಜೋಡಿಸಲಾಗಿದೆ. ಶನಿವಾರ ಈ ದಕ್ಕೆಯ ಮೂಲಕ ಗಾಝಾಕ್ಕೆ 492 ಮೆಟ್ರಿಕ್ ಟನ್ಗಳಷ್ಟು ಮಾನವೀಯ ನೆರವು ಪೂರೈಸಲಾಗಿದೆ. ಮೇ 17ರಂದು ಕಾರ್ಯಾರಂಭ ಮಾಡಿದ್ದ ತಾತ್ಕಾಲಿಕ ಧಕ್ಕೆಯ ಮೂಲಕ ಆರಂಭದ ದಿನಗಳಲ್ಲಿ ಗಾಝಾ ಪಟ್ಟಿಯಲ್ಲಿರುವ ವಿಶ್ವಸಂಸ್ಥೆ ಗೋದಾಮಿಗೆ ನೆರವು ಸಾಗಿಸುತ್ತಿದ್ದ ಟ್ರಕ್ಗಳನ್ನು ಅರ್ಧ ದಾರಿಯಲ್ಲೇ ತಡೆದು ಅದರಲ್ಲಿದ್ದ ಸರಕುಗಳನ್ನು ಬಲವಂತವಾಗಿ ಹೊತ್ತೊಯ್ದ ಘಟನೆಯ ಬಳಿಕ ಕೆಲವು ದಿನ ನೆರವು ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಬಳಿಕ ಟ್ರಕ್ಗಳ ಸಂಚಾರ ಮಾರ್ಗವನ್ನು ಬದಲಾಯಿಸುವ ಮೂಲಕ ನೆರವು ಪೂರೈಕೆ ಮುಂದುವರಿದಿತ್ತು. ಇದೀಗ ಪ್ರತೀ ಎರಡು ದಿನಕ್ಕೊಮ್ಮೆ 500 ಟನ್ಗಳಷ್ಟು ಆಹಾರ ಮತ್ತು ಇತರ ಸರಕುಗಳನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ನ ಡೆಪ್ಯುಟಿ ಕಮಾಂಡರ್ ವೈಸ್ ಅಡ್ಮಿರಲ್ ಬ್ರಾಡ್ ಕೂಪರ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯ ಜತೆ ಕೈಜೋಡಿಸಿರುವ ಅಮೆರಿಕದ `ಅಂತರ್ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ' ಸಮುದ್ರ ಮಾರ್ಗದ ಮೂಲಕ ಗಾಝಾಕ್ಕೆ ಆಹಾರ, ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಹಾಗೂ ಇತರ ಅಗತ್ಯದ ವಸ್ತುಗಳನ್ನು ತಲುಪಿಸಲು ಯೋಜನೆ ರೂಪಿಸಿದೆ. ಗಾಝಾಕ್ಕೆ ನೆರವು ಒದಗಿಸಲು ಭೂಮಾರ್ಗವನ್ನು ಮತ್ತೆ ತೆರೆಯುವಂತೆ ರಕ್ಷಣೆ ಮತ್ತು ಪರಿಹಾರ ಏಜೆನ್ಸಿಗಳು ಇಸ್ರೇಲ್ ಅನ್ನು ಆಗ್ರಹಿಸಿವೆ. ಆದರೆ, ದಕ್ಷಿಣದ ಚೆಕ್ಪಾಯಿಂಟ್ ಮೂಲಕ ನೂರಾರು ಟ್ರಕ್ಗಳನ್ನು ಗಾಝಾ ಪ್ರವೇಶಿಸಲು ಅನುಮತಿಸಲಾಗಿದೆ ಎಂದು ಇಸ್ರೇಲ್ ಹೇಳುತ್ತಿದ್ದು ಇದನ್ನು ಸೂಕ್ತವಾಗಿ ವಿತರಿಸಲು ವಿಶ್ವಸಂಸ್ಥೆ ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸುತ್ತಿದೆ. ಗಾಝಾದಲ್ಲಿರುವ ಪರಿಸ್ಥಿತಿಯಿಂದಾಗಿ ಆಹಾರ ಮತ್ತಿತರ ನೆರವಿನ ವಸ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.