ಇಸ್ರೇಲ್-ಹಮಾಸ್ ಕದನ ವಿರಾಮ : ಒಮ್ಮತದ ನಿರ್ಣಯಕ್ಕೆ ಭದ್ರತಾ ಮಂಡಳಿ ಮತ್ತೆ ವಿಫಲ
Photo: PTI
ವಿಶ್ವಸಂಸ್ಥೆ: ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಜಾರಿಗೊಳ್ಳುವ ಬಗ್ಗೆ ಚರ್ಚಿಸಲು ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಶೇಷ ಸಭೆ ಜಾಗತಿಕ ಬಲಾಢ್ಯ ದೇಶಗಳ ಪ್ರತಿಷ್ಟೆಗೆ ಬಲಿಯಾಗಿ ಯಾವುದೇ ಒಮ್ಮತದ ನಿರ್ಣಯ ಅಂಗೀಕರಿಸಲು ಮತ್ತೊಮ್ಮೆ ವಿಫಲವಾಗಿದೆ.
ಅಮೆರಿಕ ಮಂಡಿಸಿದ ಕರಡು ನಿರ್ಣಯಕ್ಕೆ 10 ಸದಸ್ಯ ದೇಶಗಳು ಬೆಂಬಲ ಸೂಚಿಸಿದರೂ ರಶ್ಯ ಮತ್ತು ಚೀನಾ ವೀಟೊ ಪ್ರಯೋಗಿಸಿದವು. ರಶ್ಯ ಮಂಡಿಸಿದ ನಿರ್ಣಯಕ್ಕೆ ಸಾಕಷ್ಟು ಸಂಖ್ಯೆಯ ಬೆಂಬಲ ದೊರಕಲಿಲ್ಲ. ರಶ್ಯ ಮತ್ತು ಅಮೆರಿಕ ಬಣಗಳ ನಡುವೆ ಸಹಮತ ಮೂಡಿಸಿ ಮತದಾನವಿಲ್ಲದೆ ನಿರ್ಣಯ ಅಂಗೀಕರಿಸಲು ಫ್ರಾನ್ಸ್ ಅಂತಿಮ ಕ್ಷಣದವರೆಗೂ ನಡೆಸಿದ ಪ್ರಯತ್ನ ವಿಫಲವಾಯಿತು ಎಂದು ವರದಿಯಾಗಿದೆ.
`ದಿಗ್ಬಂಧನಕ್ಕೊಳಗಾದ ಗಾಝಾ ಪಟ್ಟಿಗೆ ಸಹಾಯ ಮಾಡಲು `ಮಾನವೀಯ ವಿರಾಮ'ವನ್ನು ಬೆಂಬಲಿಸುವ ಮತ್ತು ಅಂತರಾಷ್ಟ್ರೀಯ ಕಾನೂನಿನ ಮಿತಿಯೊಳಗೆ ಎಲ್ಲಾ ದೇಶಗಳ ಸ್ವರಕ್ಷಣೆಯ ಹಕ್ಕನ್ನು ಬೆಂಬಲಿಸುವ' ನಿರ್ಣಯವನ್ನು ಇಸ್ರೇಲ್ನ ಐತಿಹಾಸಿಕ ಬೆಂಬಲಿಗ ಅಮೆರಿಕ ಮುಂದಿರಿಸಿತು. ಆದರೆ ಅಮೆರಿಕ ನೇತೃತ್ವದ ಈ ನಿರ್ಣಯದಲ್ಲಿ ಸಂಪೂರ್ಣ ಯುದ್ಧವಿರಾಮದ ಉಲ್ಲೇಖವಿರಲಿಲ್ಲ. ಈ ನಿರ್ಣಯವನ್ನು 10 ದೇಶಗಳು ಬೆಂಬಲಿಸಿದವು. ರಶ್ಯ ಮತ್ತು ಚೀನಾ ವೀಟೊ ಪ್ರಯೋಗಿಸಿದರೆ, ಅರಬ್ ಬಣವನ್ನು ಪ್ರತಿನಿಧಿಸುವ ಯುಎಇ ಕೂಡಾ ನಿರ್ಣಯವನ್ನು ವಿರೋಧಿಸಿತು. ಬ್ರೆಝಿಲ್ ಮತ್ತು ಮೊಝಾಂಬಿಕ್ ಮತದಾನದಲ್ಲಿ ಭಾಗವಹಿಸಲಿಲ್ಲ.
`ಭದ್ರತಾ ಮಂಡಳಿ ನಿರ್ಣಯಗಳು ಗಾಝಾದಲ್ಲಿ ಇಸ್ರೇಲ್ ನಡೆಸುವ ಸಂಭವನೀಯ ನೆಲದ ಮೇಲಿನ ಆಕ್ರಮಣದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಅಮೆರಿಕ ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜಕೀಯ ಉದ್ದೇಶದ ಈ ನಿರ್ಣಯದ ಗುರಿ ನಾಗರಿಕರ ರಕ್ಷಣೆಯಲ್ಲ, ಈ ಪ್ರದೇಶದಲ್ಲಿ ಅಮೆರಿಕದ ಸ್ಥಾನಮಾನವನ್ನು ಹೆಚ್ಚಿಸುವುದಾಗಿದೆ ' ಎಂದು ವಿಶ್ವಸಂಸ್ಥೆಗೆ ರಶ್ಯದ ಪ್ರತಿನಿಧಿ ವ್ಯಾಸಿಲಿ ನೆಬೆಂಝಿಯಾ ಟೀಕಿಸಿದ್ದಾರೆ.
`ನಿರ್ಣಯ ರೂಪಿಸುವ ಮುನ್ನ ಅಮೆರಿಕವು ಜಾಗತಿಕ ಸಮುದಾಯದ ಅಭಿಪ್ರಾಯವನ್ನು ಸಂಗ್ರಹಿಸಿದೆ. ಆದರೆ ರಶ್ಯ ಮತ್ತು ಚೀನಾ ವೀಟೊ ಪ್ರಯೋಗಿಸಿರುವುದರಿಂದ ಅತ್ಯಂತ ನಿರಾಶೆಯಾಗಿದೆ. ಯಾರೊಂದಿಗೂ ಸಮಾಲೋಚಿಸದೆ, ಹಲವು ತೊಡಕುಗಳಿರುವ ತನ್ನದೇ ಆದ ನಿರ್ಣಯವನ್ನು ರಶ್ಯ ಮುಂದಿರಿಸಿರುವುದು ಸಿನಿಕತನ ಮತ್ತು ಬೇಜವಾಬ್ದಾರಿಯ ವರ್ತನೆಯಾಗಿದೆ' ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಪ್ರತಿಕ್ರಿಯಿಸಿದ್ದಾರೆ.
ಭದ್ರತಾ ಮಂಡಳಿ ಒಮ್ಮತದ ನಿರ್ಣಯಕ್ಕೆ ವಿಫಲವಾಗಿರುವುದರಿಂದ ಗುರುವಾರ ಮತ್ತು ಶುಕ್ರವಾರ ನಡೆಯುವ ವಿಶ್ವಸಂಸ್ಥೆಯ ವಿಶೇಷ ಸಭೆಯಲ್ಲಿ ಯುದ್ಧದ ಬಗ್ಗೆ ಚರ್ಚೆ ನಡೆಯಲಿದೆ. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ದೇಶಗಳೂ ಪಾಲ್ಗೊಳ್ಳಲಿದ್ದು ಯಾವುದೇ ದೇಶಕ್ಕೆ ವೀಟೊ ಚಲಾಯಿಸುವ ಅಧಿಕಾರ ಇರುವುದಿಲ್ಲ ಎಂದು ಮೂಲಗಳು ಹೇಳಿವೆ.
ರಶ್ಯ ಮಂಡಿಸಿದ ನಿರ್ಣಯ
ರಶ್ಯ ತನ್ನದೇ ಆದ ನಿರ್ಣಯ ಮಂಡಿಸಿದ್ದು `ತಕ್ಷಣದ, ಬಾಳಿಕೆ ಬರುವ ಮತ್ತು ಸಂಪೂರ್ಣ ಗೌರವಾನ್ವಿತ ಮಾನವೀಯ ಕದನ ವಿರಾಮ' ಮತ್ತು `ನಾಗರಿಕರ ವಿರುದ್ಧದ ಎಲ್ಲಾ ಹಿಂಸಾಚಾರ ಮತ್ತು ಹಗೆತನವನ್ನು ಖಂಡಿಸುವ' ಪ್ರಸ್ತಾವವನ್ನು ಇದು ಒಳಗೊಂಡಿದೆ.
ಈ ನಿರ್ಣಯದ ಪರ ರಶ್ಯ, ಚೀನಾ, ಯುಎಇ ಮತ್ತು ಗಾಬನ್ ದೇಶಗಳು ಮತ ಚಲಾಯಿಸಿದರೆ ಅಮೆರಿಕ ಮತ್ತು ಬ್ರಿಟನ್ ವೀಟೊ ಚಲಾಯಿಸಿದವು. ಫ್ರಾನ್ಸ್, ಜಪಾನ್ ಸೇರಿದಂತೆ 9 ದೇಶಗಳು ಮತದಾನದಲ್ಲಿ ಭಾಗವಹಿಸಲಿಲ್ಲ.