ಬಾಂಗ್ಲಾದೇಶದ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತ ಆಗಿರಲಿಲ್ಲ: ಅಮೆರಿಕ
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (PTI)
ವಾಷಿಂಗ್ಟನ್: ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿರಲಿಲ್ಲ. ಚುನಾವಣೆ ಸಂದರ್ಭ ನಡೆದ ಹಿಂಸಾಚಾರ ಖಂಡನೀಯವಾಗಿದೆ ಮತ್ತು ಎಲ್ಲಾ ಪಕ್ಷಗಳೂ ಚುನಾವಣೆಯಲ್ಲಿ ಪಾಲ್ಗೊಳ್ಳದಿರುವುದು ವಿಷಾದನೀಯ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಭರ್ಜರಿ ಬಹುಮತ ಪಡೆದಿರುವುದರಿಂದ ರಾಜಕೀಯ ವಿರೋಧಿಗಳ ಬಂಧನ ಪ್ರಕ್ರಿಯೆ ನಡೆಯಬಹುದು ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ.
ಆದರೆ ಇಂಡೊ-ಪೆಸಿಫಿಕ್ ನಲ್ಲಿ ಬಾಂಗ್ಲಾದೊಂದಿಗೆ ಪಾಲುದಾರಿಕೆ, ಆರ್ಥಿಕ ಮತ್ತು ಜನರ-ಜನರ ನಡುವಿನ ಸಂಪರ್ಕವನ್ನು ಗಾಢವಾಗಿಸುವುದು, ಮತ್ತು ದೇಶದಲ್ಲಿ ಮಾನವ ಹಕ್ಕುಗಳು ಮತ್ತು ನಾಗರಿಕ ಸಮಾಜವನ್ನು ರಕ್ಷಿಸಲು ಅಮೆರಿಕ ಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ. ರವಿವಾರ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷ ಮತ್ತೆ ಅಧಿಕಾರಕ್ಕೆ ಮರಳಿದ್ದು ಶೇಖ್ ಹಸೀನಾ ಸತತ 4ನೇ ಮತ್ತು ಒಟ್ಟು 5ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿ ದಾಖಲೆ ಸ್ಥಾಪಿಸಿದ್ದರು. ಆದರೆ ಚುನಾವಣೆ ಸಂದರ್ಭ ನಡೆದ ವ್ಯಾಪಕ ಹಿಂಸಾಚಾರ, ವಿರೋಧಿಗಳ ಬಂಧನ ಪ್ರಕ್ರಿಯೆ, ಪ್ರಮುಖ ವಿರೋಧ ಪಕ್ಷಗಳಿಂದ ಚುನಾವಣೆ ಬಹಿಷ್ಕಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾಪ್ರಭುತ್ವ, ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗಾಗಿ ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಬೆಂಬಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶದ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಗೆಲುವು ಸಾಧಿಸಿದ ಅವಾಮಿ ಲೀಗ್ ಪಕ್ಷವನ್ನು ಅಮೆರಿಕ ಅಭಿನಂಧಿಸಿಲ್ಲ. ಆದರೆ ಫಲಿತಾಂಶವನ್ನು ತಿರಸ್ಕರಿಸುವುದಾಗಿಯೂ ಹೇಳಿಲ್ಲ. ಚುನಾವಣೆ ಸಂದರ್ಭ ಮತ್ತು ಅದಕ್ಕೂ ಮುಂಚಿನ ದಿನಗಳಲ್ಲಿ ದೇಶದಲ್ಲಿ ನಡೆದಿದ್ದ ವ್ಯಾಪಕ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಹಿಂಸಾಚಾರದ ಬಗ್ಗೆ ತನಿಖೆ ನಡೆಸಿ ಅಪರಾಧಿಗಳನ್ನು ಗುರುತಿಸಿ ಶಿಕ್ಷೆ ವಿಧಿಸುವಂತೆ ಬಾಂಗ್ಲಾದೇಶದ ಸರಕಾರವನ್ನು ಆಗ್ರಹಿಸಿದೆ. ಆದರೆ ದ್ವಿಪಕ್ಷೀಯ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಬದ್ಧ ಎಂದು ಘೋಷಿಸಿದೆ.