ಉಕ್ರೇನ್ ನೇಟೊ ಸದಸ್ಯತ್ವ ಪಡೆಯಲಿದೆ : ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್
Photo : X/@ABlinken
ಬ್ರಸೆಲ್ಸ್: ಉಕ್ರೇನ್ಗೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ `ಉಕ್ರೇನ್ ಖಂಡಿತವಾಗಿಯೂ ನೇಟೊ ಸದಸ್ಯತ್ವ ಪಡೆಯಲಿದೆ' ಎಂದಿದ್ದಾರೆ.
ಬ್ರಸೆಲ್ಸ್ ನಲ್ಲಿ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕ್ಯುಲೆಬಾ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕನ್ `ಉಕ್ರೇನ್ ಮತ್ತು ಅದರ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಗೆ ಅಮೆರಿಕದ ಬೆಂಬಲ ಮುಂದುವರಿಯುತ್ತದೆ' ಎಂದರು.
ನೇಟೊದ ಮುಂದಿನ ವಾರ್ಷಿಕ ಸಭೆ ಜುಲೈಯಲ್ಲಿ ವಾಷಿಂಗ್ಟನ್ನಲ್ಲಿ ನಡೆಯಲಿದೆ. ಉಕ್ರೇನ್ನ ಸದಸ್ಯತ್ವಕ್ಕೆ ಒಂದು ಸೇತುವೆ ನಿರ್ಮಿಸಿ ಆ ಸೇತುವೆಯ ಮೂಲಕ ಸದಸ್ಯತ್ವದತ್ತ ಉಕ್ರೇನ್ ತ್ವರಿತವಾಗಿ ಮುಂದುವರಿಯಬೇಕು ಎಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಜುಲೈ ಶೃಂಗಸಭೆಯಲ್ಲಿ ಉಕ್ರೇನ್ನ ಸದಸ್ಯತ್ವದ ಬಗ್ಗೆ ಸರ್ವಾನುಮತದ ಬೆಂಬಲ ಒಗ್ಗೂಡಿಸುವ ವಿಶ್ವಾಸವಿದೆ. ಆದರೆ ಇದಕ್ಕೂ ಮುನ್ನ, ಉಕ್ರೇನ್ಗೆ ಈಗ ಎದುರಾಗಿರುವ ಸಮಸ್ಯೆಯನ್ನು ಎದುರಿಸುವತ್ತ(ರಶ್ಯದ ಆಕ್ರಮಣ) ತುರ್ತು ಗಮನ ಹರಿಸಬೇಕಾಗಿದೆ ಎಂದು ಬ್ಲಿಂಕನ್ ಹೇಳಿದ್ದಾರೆ.
ಉಕ್ರೇನ್ ನೇಟೊ ಸದಸ್ಯನಾಗುವುದು ತನ್ನ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಲಿದೆ ಎಂದು ರಶ್ಯ ಆತಂಕ ವ್ಯಕ್ತಪಡಿಸುತ್ತಿದೆ. `ನೇಟೋ ಈಗಾಗಲೇ ಉಕ್ರೇನ್ ಸಂಘರ್ಷದಲ್ಲಿ ಶಾಮೀಲಾಗಿದೆ. ಉಕ್ರೇನ್ನಲ್ಲಿ ತನ್ನ ಪಡೆಗಳನ್ನು ಇರಿಸುವ ಮೂಲಕ ನೇಟೊ ನಮ್ಮ ಗಡಿಗೆ ಇನ್ನಷ್ಟು ಸನಿಹಗೊಂಡಿದೆ' ಎಂದು ರಶ್ಯ ಸರಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಕಳೆದ ವಾರ ಹೇಳಿದ್ದರು.