ಮಂಗೋಲಿಯಾ ಮಾಜಿ ಪ್ರಧಾನಿಯ ನ್ಯೂಯಾರ್ಕ್ ಅಪಾರ್ಟ್ಮೆಂಟ್ ಮುಟ್ಟುಗೋಲಿಗೆ ಅಮೆರಿಕ ನಿರ್ಧಾರ
Photo : X/@BatboldSukh
ನ್ಯೂಯಾರ್ಕ್: ಮಂಗೋಲಿಯಾದ ಮಾಜಿ ಪ್ರಧಾನಿ ನ್ಯೂಯಾರ್ಕ್ನಲ್ಲಿ ಹೊಂದಿರುವ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಅಮೆರಿಕ ಘೋಷಿಸಿದೆ.
ಅಕ್ರಮ ಭ್ರಷ್ಟಾಚಾರ ಪ್ರಕರಣದಿಂದ ಪಡೆದ ಹಣದಿಂದ ಮಂಗೋಲಿಯಾದ ಮಾಜಿ ಪ್ರಧಾನಿ ಸುಖ್ಬಾತರ್ ಬ್ಯಾಟ್ಬೋಲ್ಡ್ 2 ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಖರೀದಿಸಿದ್ದಾರೆ. ಪ್ರಧಾನಿಯಾಗಿದ್ದಾಗ ತನ್ನ ಪ್ರಭಾವ ಬಳಸಿಕೊಂಡು ಮಂಗೋಲಿಯಾದ ಗಣಿ ಗುತ್ತಿಗೆಯನ್ನು ತನಗೆ ಬೇಕಾದವರಿಗೆ ವಹಿಸಿಕೊಟ್ಟು ಕೋಟ್ಯಾಂತರ ಡಾಲರ್ ಅಕ್ರಮ ಲಾಭ ಗಳಿಸಿದ್ದಾರೆ. ಈ ಹಣವನ್ನು ಬಳಸಿ ನ್ಯೂಯಾರ್ಕ್ನಲ್ಲಿ 2 ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಖರೀದಿಸಿದ್ದಾರೆ ಎಂದು ಅಮೆರಿಕದ ನ್ಯಾಯ ಇಲಾಖೆ ಹೇಳಿದೆ.
ಈ ಅಪಾರ್ಟ್ಮೆಂಟ್ಗಳನ್ನು ಹರಾಜು ಹಾಕಿ, ಭ್ರಷ್ಟ ಅಧಿಕಾರಿಗಳು ತಮ್ಮ ಅಪರಾಧ ಕೃತ್ಯಗಳಿಂದ ಪಡೆದ ಲಾಭದ ಹಣವನ್ನು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವಿನಿಯೋಗಿಸುವುದಕ್ಕೆ ಅಮೆರಿಕ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಪ್ರಸಾರ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ನ್ಯೂಯಾರ್ಕ್ ಪೂರ್ವಜಿಲ್ಲೆಯ ಅಟಾರ್ನಿ ಬ್ರಿಯಾನ್ ಪೀಸ್ ಹೇಳಿದ್ದಾರೆ.