ಯೆಮನ್ ನಲ್ಲಿ ಹೌದಿ ನೆಲೆಗಳ ಮೇಲೆ ಅಮೆರಿಕ ದಾಳಿ: ವರದಿ
ಸನಾ : ಯೆಮನ್ ನಲ್ಲಿ ಹೌದಿಗಳ ನಿಯಂತ್ರಣದ ಪ್ರದೇಶಗಳಲ್ಲಿರುವ ನೆಲೆಗಳ ಮೇಲೆ ಅಮೆರಿಕದ ಮಿಲಿಟರಿ ಪಡೆಗಳು ದಾಳಿ ನಡೆಸಿ ಎರಡು ಡ್ರೋನ್ ಗಳನ್ನು ಮತ್ತು ಮೂರು ಹಡಗು ವಿರೋಧಿ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಇದಕ್ಕೂ ಮುನ್ನ, ಬುಧವಾರ ಏಡನ್ ಕೊಲ್ಲಿಯಲ್ಲಿ ಅಮೆರಿಕದ ಎರಡು ಸಮರ ನೌಕೆಗಳು ಹಾಗೂ ಕೆಂಪು ಸಮುದ್ರದ ಮೂಲಕ ಸಾಗುತ್ತಿದ್ದ ಕಂಟೈನರ್ ಹಡಗಿನ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿತ್ತು. ಬುಧವಾರ ಅಮೆರಿಕದ ಸಮರ ನೌಕೆಗಳಾದ ಕೋಲ್ ಮತ್ತು ಲಬೂನ್ನ ಮೇಲೆ ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಲಾಗಿದೆ. ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಲೈಬೀರಿಯಾ ಧ್ವಜ ಹೊಂದಿರುವ ಕಂಟೈನರ್ ಹಡಗಿನ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದನ್ನು ಹೌದಿ ಮಿಲಿಟರಿ ವಕ್ತಾರರು ದೃಢಪಡಿಸಿದ್ದರು.
ಈ ದಾಳಿಗೆ ಪ್ರತಿಯಾಗಿ ಹೌದಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ. ಹೌದಿಗಳ ಬಳಿಯಿರುವ ಶಸ್ತ್ರಾಸ್ತ್ರಗಳು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಪಡೆಗಳಿಗೆ ಹಾಗೂ ಈ ವಲಯದಲ್ಲಿ ವ್ಯಾಪಾರಿ ಹಡಗುಗಳಿಗೆ ಸ್ಪಷ್ಟ ಮತ್ತು ಸನ್ನಿಹಿತ ಬೆದರಿಕೆಯನ್ನು ಪ್ರಸ್ತುತಪಡಿಸಿವೆ. ಹೌದಿಗಳ ಈ ಬೇಜವಾಬ್ದಾರಿ ಮತ್ತು ಅಪಾಯಕಾರಿ ನಡವಳಿಕೆಯು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯೊಡ್ಡಿದೆ ಎಂದು ಅಮೆರಿಕದ ಸೇನಾಪಡೆ ಹೇಳಿದೆ.