ಅಮೆರಿಕದ ಆಮದು ಉಕ್ಕು, - ಆಲ್ಯುಮಿನಿಯಂಗೆ ಶೇ.25 ಸುಂಕ: ಕಾರ್ಯಾದೇಶಕ್ಕೆ ಟ್ರಂಪ್ ಸಹಿ
►ಮಾರ್ಚ್ 12ರಿಂದ ಜಾರಿ ►ಯುರೋಪ್ ಒಕ್ಕೂಟದಿಂದ ತೀವ್ರ ವಿರೋಧ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (PTI)
ವಾಶಿಂಗ್ಟನ್1: ಮಾರ್ಚ್ 12ರಿಂದ ಅಮೆರಿಕಕ್ಕೆ ಆಮದಾಗುವ ಉಕ್ಕು ಮತ್ತು ಆಲ್ಯುಮಿನಿಯಂಗೆ ಶೇ.25ರಷ್ಟು ಸುಂಕವನ್ನು ವಿಧಿಸುವ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಸಹಿಹಾಕಿದ್ದಾರೆ.
ಟ್ರಂಪ್ ನಡೆಯನ್ನು ಬಲವಾಗಿ ಖಂಡಿಸಿರುವ ಯುರೋಪ್ ಒಕ್ಕೂಟವು, ಈ ನಿಟ್ಟಿನಲ್ಲಿ ತಾನು ದೃಢ ಹಾಗೂ ಗಣನೀಯವಾದ ಪ್ರತಿಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದೆ.
ಆರ್ಜೆಂಟೀನಾ, ಆಸ್ಟ್ರೇಲಿಯ, ಕೆನಡಾ, ಮೆಕ್ಸಿಕೋ, ಯುರೋಪ್ ರಾಷ್ಟ್ರಗಳು ಮತ್ತು ಬ್ರಿಟನ್ನಿಂದ ಆಮಾದುಗುವ ಆಲ್ಯುಮಿನಿಯಂ ಲೋಹ ಹಾಗೂ ಆಲ್ಯುಮಿನಿಯಂ ಉತ್ಪನ್ನಗಳು 2025ರ ಮಾರ್ಚ್ 12ರಿಂದ ಹೆಚ್ಚುವರಿ ಸುಂಕಕ್ಕೆ ಒಳಪಡಲಿವೆ ಎಂದು ಟ್ರಂಪ್ ಕಾರ್ಯಾದೇಶದಲ್ಲಿ ತಿಳಿಸಿದ್ದಾರೆ.
ಉಕ್ಕಿನ ಆಮದಿಗೆ ಸಂಬಂಧಿಸಿದಂತೆಯೂ ಈ ದೇಶಗಳ ಜೊತೆಗೆ ಜಪಾನ್,ಬ್ರೆಝಿಲ್ ಮತ್ತು ದಕ್ಷಿಣ ಕೊರಿಯಾಕ್ಕೆ ಹೆಚ್ಚುವರಿ ಸುಂಕವನ್ನು ವಿಧಿಸುವ ಪ್ರತ್ಯೇಕ ಆದೇವನ್ನು ಕೂಡಾ ಟ್ರಂಪ್ ಹೊರಡಿಸಿದ್ದಾರೆ.
ಪರೋಕ್ಷವಾಗಿ ಚೀನಾವನ್ನು ಗುರಿಯಿರಿಸಿ ಈ ಕಾರ್ಯಾದೇಶವನ್ನು ಜಾರಿಗೊಳಿಸಲಾಗಿದೆಯೆಂದು ಹೇಳಲಾಗುತ್ತಿದೆ. ವಿಶೇಷವಾಗಿ ಮೆಕ್ಸಿಕೋ ಸೇರಿದಂತೆ ಕೆಲವು ದೇಶಗಳು ಅಮೆರಿಕದೊಳಗೆ ಚೀನಾದ ಆಮದುಗಳನ್ನು ತರಲು, ತಮಗಿರುವ ವಿನಾಯಿತಿ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿವೆಯೆಂದು ಟ್ರಂಪ್ ಆದೇಶದಲ್ಲಿ ತಿಳಿಸಿದ್ದಾರೆ.
ಮೆಕ್ಸಿಕೊದ ಮೂಲಕ ಅಮೆರಿಕದೊಳಗೆ ಚೀನಿ ಆಲ್ಯುಮಿನಿಂಯನ್ನು ಸಾಗಿಸಲು ಮೆಕ್ಸಿಕೊಗೆ ನೀಡಲಾಗುತ್ತಿದ್ದ ಸಾರ್ವತ್ರಿಕ ರಿಯಾಯಿತಿಯನ್ನು ಚೀನಿ ತಯಾರಕರು ಬಳಸಿಕೊಳ್ಳುತ್ತಿದ್ದರೆಂದು ಕಾರ್ಯಾದೇಶದಲ್ಲಿ ತಿಳಿಸಲಾಗಿದೆ.
ಕೆನಡಾ, ಮೆಕ್ಸಿಕೊ ಹಾಗೂ ಬ್ರೆಝಿಲ್ ಅಮೆರಿಕಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಉಕ್ಕು ರಫ್ತು ಮಾಡುವ ರಾಷ್ಟ್ರಗಳಾಗಿವೆ. ದಕ್ಷಿಣ ಕೊರಿಯ ಆನಂತರದ ಸ್ಥಾನದಲ್ಲಿದೆ.
ಅಮೆರಿಕಕ್ಕೆ ಆಮದಾಗುವ ಆಟೋಮೊಬೈಲ್ಗಳು, ಫಾರ್ಮಾಸ್ಯೂಟಿಕಲ್ಗಳು ಹಾಗೂ ಕಂಪ್ಯೂಟರ್ ಚಿಪ್ಗಳ ಮೇಲೂ ಹೆಚ್ಚುವರಿ ಸುಂಕಗಳನ್ನು ವಿಧಿಸಲಾಗುವುದೆಂದು ಟ್ರಂಪ್ ಸೂಚನೆಯನ್ನು ನೀಡಿದ್ದಾರೆ.
*ಅಮೆರಿಕ ಕ್ರಮಕ್ಕೆ ಸೂಕ್ತ ಉತ್ತರ ನೀಡುವೆವು: ವೊನ್ ಡೆರ್ ಲಿಯೆನ್
ಅಮೆರಿಕಕ್ಕೆ ಆಮದಾಗುವ ಉಕ್ಕು ಹಾಗೂ ಆಲ್ಯೂಮಿನಿಯಂಗಳಿಗೆ ಸುಂಕವನ್ನು ವಿಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಯುರೋಪ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲಿಯೆನ್ ಮಂಗಳವಾರ ಖಂಡಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಈ ಕ್ರಮಕ್ಕೆ ಸೂಕ್ತ ಉತ್ತರ ನೀಡುವುದಾಗಿ ಅವರು ಹೇಳಿದ್ದಾರೆ.
‘‘ಯುರೋಪ್ ಒಕ್ಕೂಟದ ಮೇಲೆ ಅಸಮರ್ಥನೀಯವಾಗಿ ಸುಂಕಗಳನ್ನು ವಿಧಿಸಿರುವುದಕ್ಕೆ ಉತ್ತರ ನೀಡದೆ ಬಿಡಲಾಗದು. ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಯುರೋಪ್ ಒಕ್ಕೂಟ ಕಾಪಾಡಿಕೊಳ್ಳಲಿದೆ. ನಮ್ಮ ಕಾರ್ಮಿಕರು, ಉದ್ದಿಮೆಗಳು ಹಾಗೂ ಗ್ರಾಹಕರನ್ನು ನಾವು ರಕ್ಷಿಸಲಿದೆ ’’ ಎಂದವರು ಹೇಳಿದ್ದಾರೆ.