ಟ್ರಂಪ್ ವಿರುದ್ಧ ಪಿತೂರಿ ನಿಲ್ಲಿಸಿ : ಇರಾನ್ ಗೆ ಅಮೆರಿಕ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ | PC : PTI
ವಾಶಿಂಗ್ಟನ್ : ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಎಲ್ಲಾ ಪಿತೂರಿಗಳನ್ನೂ ನಿಲ್ಲಿಸುವಂತೆ ಇರಾನ್ ಗೆ ಅಮೆರಿಕ ಸರಕಾರ ಎಚ್ಚರಿಸಿದ್ದು ಅವರ ಹತ್ಯೆಗೆ ನಡೆಯುವ ಯಾವುದೇ ಪ್ರಯತ್ನವನ್ನು ಯುದ್ಧದ ಕೃತ್ಯವೆಂದು ಪರಿಗಣಿಸುವುದಾಗಿ ಹೇಳಿದೆ.
ಟ್ರಂಪ್ ಹಾಗೂ ಅಮೆರಿಕನ್ನರ ವಿರುದ್ಧದ ಇರಾನಿನ ಪಿತೂರಿಗಳ ಬಗ್ಗೆ ಅಧ್ಯಕ್ಷ ಬೈಡನ್ ಗೆ ನಿಯಮಿತವಾಗಿ ವಿವರಿಸಲಾಗಿದೆ ಮತ್ತು ಈ ಬಗ್ಗೆ ಗಮನ ಹರಿಸುವಂತೆ ಅಧ್ಯಕ್ಷರು ಸೂಚಿಸಿದ್ದಾರೆ. ಬಳಿಕ ಉನ್ನತ ಮಟ್ಟದಲ್ಲಿ ಇರಾನ್ ಸರಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪದ ಆರೋಪಗಳನ್ನು ಇರಾನ್ ನಿರಾಕರಿಸಿದ್ದು, ಹಲವು ದಶಕಗಳಿಂದ ಇರಾನ್ನದ ಆಂತರಿಕ ವ್ಯವಹಾರದಲ್ಲಿ ಅಮೆರಿಕ ಹಸ್ತಕ್ಷೇಪ ನಡೆಸುತ್ತಿದೆ. 1953ರಲ್ಲಿ ಅಂದಿನ ಪ್ರಧಾನಿಯ ವಿರುದ್ಧದ ದಂಗೆ, 2020ರಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನಿನ ಮಿಲಿಟರಿ ಕಮಾಂಡರ್ ಹತರಾಗಿರುವುದು ಇದಕ್ಕೆ ಕೆಲವು ಉದಾಹರಣೆಗಳು ಎಂದಿದೆ.