ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಉದ್ದೇಶಪೂರ್ವಕ ವಿಮಾನ ಅಪಘಾತ: ಯೂಟ್ಯೂಬರ್‌ಗೆ 6 ತಿಂಗಳ ಜೈಲುಶಿಕ್ಷೆ
ವಾಷಿಂಗ್ಟನ್: ತನ್ನ ಯೂಟ್ಯೂಬ್ ಚಾನೆಲ್ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ವಿಮಾನವೊಂದನ್ನು ಉದ್ದೇಶಪೂರ್ವಕವಾಗಿ ಅಪಘಾತಕ್ಕೆ ಒಳಪಡಿಸಿದ್ದ ಯೂಟ್ಯೂಬರ್ ಟ್ರೆವರ್ ಜಾಕೋಬ್‌ಗೆ 6 ತಿಂಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
‘ನಾನು ನನ್ನ ವಿಮಾನವನ್ನು ಅಪ್ಪಳಿಸಿದೆ’ ಎಂಬ ಶೀರ್ಷಿಕೆ ಹೊಂದಿರುವ ವೀಡಿಯೊದಲ್ಲಿ ‘ದಕ್ಷಿಣ ಕ್ಯಾಲಿಫೋರ್ನಿಯಾದ ಮೇಲೆ ಹಾರುತ್ತಿದ್ದ ಸಂದರ್ಭ ತನ್ನ ವಿಮಾನದ ಇಂಜಿನ್‌ನಲ್ಲಿ ಸಮಸ್ಯೆಯಿರುವುದನ್ನು ಗಮನಿಸಿದೆ’ ಎಂದು ಜಾಕೋಬ್ ಹೇಳಿಕೊಂಡಿದ್ದಾನೆ. 2021ರ ನವೆಂಬರ್‌ನಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದ್ದು ಒಂದು ಕೈಯಲ್ಲಿ ಸೆಲ್ಫೀ ಸ್ಟಿಕ್ ಹಿಡಿದ ಜಾಕೋಬ್ ಸಿಂಗಲ್ ಇಂಜಿನ್ ವಿಮಾನದಿಂದ ಪ್ಯಾರಾಚೂಟ್ ಬಳಸಿ ಲಾಸ್‌ಪದ್ರೆಸ್ ರಾಷ್ಟ್ರೀಯ ಅರಣ್ಯದೊಳಗೆ ಇಳಿಯುತ್ತಿರುವ ದೃಶ್ಯವಿದೆ. ವಿಮಾನದಲ್ಲಿ ಹಲವು ಕ್ಯಾಮೆರಾಗಳನ್ನು ಫಿಕ್ಸ್ ಮಾಡಿದ್ದು ವಿಮಾನ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸುವುದು ಒಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ಯಾರಾಚೂಟ್ ಮೂಲಕ ನೆಲ ತಲುಪಿದ ಜಾಕೋಬ್ ವಿಮಾನದ ಭಗ್ನಾವೇಷದತ್ತ ನಡೆದುಕೊಂಡು ಹೋಗಿ, ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಪಡೆಯುತ್ತಿರುವುದನ್ನೂ ಚಿತ್ರೀಕರಿಸಿಕೊಂಡಿದ್ದಾನೆ.
ವಿಮಾನ ಅಪಘಾತವಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ತನಿಖೆ ನಡೆದಾಗ ತನಗೆ ಏನೂ ತಿಳಿದಿಲ್ಲ ಎಂದು ಜಾಕೋಬ್ ತನಿಖೆಯ ದಾರಿ ತಪ್ಪಿಸಿದ್ದ ಎಂದು ಕ್ಯಾಲಿಫೋರ್ನಿಯ ಜಿಲ್ಲಾ ಅಟಾರ್ನಿಯವರ ಹೇಳಿಕೆ ತಿಳಿಸಿದೆ.