ಗಾಝಾದಲ್ಲಿ ಮನೆಗಳ ಧ್ವಂಸಕ್ಕೆ ಬಳಕೆ: ಇಸ್ರೇಲ್ಗೆ 130 ಬುಲ್ಡೋಜರ್ಗಳ ಪೂರೈಕೆ ತಡೆದ ಅಮೆರಿಕ; ವರದಿ
ಸಾಂದರ್ಭಿಕ ಚಿತ್ರ | PC ; aljazeera.com
ವಾಷಿಂಗ್ಟನ್: ಗಾಝಾ ಪಟ್ಟಿಯಲ್ಲಿನ ಮನೆಗಳನ್ನು ಕೆಡವಲು ಬಳಸಲಾಗುತ್ತಿದೆ ಎಂಬ ಕಳವಳಗಳಿಂದಾಗಿ ಅಮೆರಿಕವು ಇಸ್ರೇಲ್ಗೆ 130 ಬುಲ್ಡೋಜರ್ಗಳ ಪೂರೈಕೆಯನ್ನು ತಡೆಹಿಡಿದಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
Yedioth Ahronoth ವರದಿಯ ಪ್ರಕಾರ,ಇಸ್ರೇಲಿ ರಕ್ಷಣಾ ಸಚಿವಾಲಯವು ಸುಮಾರು 130 D9 ಬುಲ್ಡೋಜರ್ಗಳ ಖರೀದಿಗಾಗಿ ಅಮೆರಿಕದ ಯಂತ್ರೋಪಕರಣ ತಯಾರಕ ಕ್ಯಾಟರ್ಪಿಲ್ಲರ್ ಜೊತೆ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಗಾಝಾದಲ್ಲಿ ಈ ಬುಲ್ಡೋಜರ್ಗಳ ಬಳಕೆಯ ಕುರಿತು ವ್ಯಾಪಕ ಟೀಕೆಗಳ ಬಳಿಕ ಅಮೆರಿಕವು ಇತ್ತೀಚಿಗೆ ಈ ಒಪ್ಪಂದವನ್ನು ತಡೆಹಿಡಿದಿದೆ.
ಬುಲ್ಡೋಜರ್ಗಳಿಗಾಗಿ ಇಸ್ರೇಲ್ ಈಗಾಗಲೇ ಹಣವನ್ನು ಪಾವತಿಸಿದೆ ಮತ್ತು ಅಮೆರಿಕದ ವಿದೇಶಾಂಗ ಇಲಾಖೆಯಿಂದ ಅನುಮೋದನೆಗಾಗಿ ಕಾಯುತ್ತಿದೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಹೇಳಿವೆ.
ಇಸ್ರೇಲ್ಗೆ, ವಿಶೇಷವಾಗಿ ಯಂತ್ರೋಪಕರಣಗಳು ನಿರ್ವಹಣೆಗೆ ಒಳಗಾಗಿರುವಾಗ ಮತ್ತು ಇಸ್ರೇಲಿ ಸೇನೆಯು ದಕ್ಷಿಣ ಲೆಬನಾನ್ನಲ್ಲಿ ಭೂ ಕಾರ್ಯಾಚರಣೆಗಳಲ್ಲಿ ತೊಡಗಿರುವಾಗ,ಬುಲ್ಡೋಜರ್ಗಳ ತುರ್ತು ಅಗತ್ಯವಿರುವ ಸಮಯದಲ್ಲಿ ಪೂರೈಕೆಯು ವಿಳಂಬಗೊಂಡಿದೆ.
ಅಮೆರಿಕದ ಕ್ರಮವು ಗಾಝಾ ಮತ್ತು ದಕ್ಷಿಣ ಇಸ್ರೇಲ್ನ ನೆಗೆವ್ ಪ್ರದೇಶದ ನಡುವೆ ಮೀಸಲು ವಲಯವನ್ನು ಸೃಷ್ಟಿಸುವ ಇಸ್ರೇಲಿ ಯೋಜನೆಗಳನ್ನು ವಿಳಂಬಿಸಿದೆ. ಗಾಝಾ ಗಡಿಯುದ್ದಕ್ಕೂ ನೂರಾರು ಫೆಲೆಸ್ತೀನಿ ಮನೆಗಳು ಮತ್ತು ಕೃಷಿ ಪ್ರದೇಶಗಳನ್ನು ನೆಲಸಮಗೊಳಿಸುವುದನ್ನು ಈ ಯೋಜನೆಯು ಒಳಗೊಂಡಿದೆ.
ಬುಲ್ಡೋಜರ್ಗಳ ಜೊತೆಗೆ ಇಸ್ರೇಲ್ ಬೋಯಿಂಗ್ನಿಂದ ಖರೀದಿಸಿರುವ ನೂರಾರು ಭಾರೀ ಬಾಂಬ್ಗಳ ಪೂರೈಕೆಯನ್ನೂ ಅಮೆರಿಕವು ಸ್ಥಗಿತಗೊಳಿಸಿದೆ. ತಲಾ ಸುಮಾರು ಒಂದು ಟನ್ ತೂಗುವ ಈ ಬಾಂಬ್ಗಳನ್ನು ಇಸ್ರೇಲಿ ಸೇನೆಯಿಂದ ಬಳಕೆಗೆ ಉದ್ದೇಶಿಸಲಾಗಿತ್ತು. ಆದರೆ ಗಾಝಾದಲ್ಲಿ ನಾಗರಿಕರಿಗೆ ಹಾನಿಯನ್ನುಂಟು ಮಾಡಲು ಅವುಗಳ ಬಳಕೆಯಾಗಬಹುದು ಎಂಬ ಕಳವಳಗಳು ವ್ಯಕ್ತವಾಗಿದ್ದವು. ಖರೀದಿ ಮಾಡಲಾಗಿರುವ ಅರ್ಧದಷ್ಟು ಬಾಂಬ್ಗಳು ಪೂರೈಕೆಯಾಗಿದ್ದು,ಉಳಿದವುಗಳ ಪೂರೈಕೆಯನ್ನು ತಡೆಹಿಡಿಯಲಾಗಿದೆ ಎಂದು saudigazette.com.sa ವರದಿ ಮಾಡಿದೆ.