ಭಾರತೀಯ ಮೂಲದ ಉಷಾ ಚಿಲುಕುರಿಗೆ ಅಮೆರಿಕಾದ ದ್ವಿತೀಯ ಮಹಿಳೆ ಗೌರವ!
ಉಷಾ ಚಿಲುಕುರಿ ವ್ಯಾನ್ಸ್ | PC : X \ @airnewsalerts
ವಾಶಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕಾದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಮೆರಿಕಾದ ಉಪಾಧ್ಯಕ್ಷರಾಗಿ ಓಹಾಯೋ ಸೆನೆಟರ್ J.D.ವ್ಯಾನ್ಸ್ ಆಯ್ಕೆಯಾಗಿದ್ದಾರೆ. ಉಷಾ ಚಿಲುಕುರಿ ವ್ಯಾನ್ಸ್ J.D.ವ್ಯಾನ್ಸ್ ಪತ್ನಿಯಾಗಿದ್ದು, ಇದರಿಂದ ಅಮೆರಿಕಾದ ದ್ವಿತೀಯ ಮಹಿಳೆ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಅಮೆರಿಕಾದ ದ್ವಿತೀಯ ಮಹಿಳೆಯ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಯೂ ಅವರದ್ದಾಗಿದೆ.
ಉಷಾ ಚಿಲುಕುರಿ ವ್ಯಾನ್ಸ್ ಅವರ ಪೋಷಕರು 1970ರಲ್ಲಿ ಅಮೆರಿಕಾಗೆ ತೆರಳಿದ್ದರು. ಉಷಾ ಸ್ಯಾನ್ ಡಿಯಾಗೋ ಉಪನಗರದಲ್ಲಿ ಹುಟ್ಟಿ ಬೆಳೆದಿದ್ದರು. ಉಷಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಚಿಲುಕುರಿ ಅವರು ಈ ಮೊದಲು ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. ಬಳಿಕ ರಿಪಬ್ಲಿಕ್ ಪಕ್ಷ ಸೇರಿಕೊಂಡು, ಪತಿಯ ಪರವಾಗಿ ಸೆನೆಟರ್ ಚುನಾವಣೆಯಲ್ಲಿ ಪ್ರಚಾರ ಕೂಡ ನಡೆಸಿದ್ದರು. ಸದ್ಯ ಅವರ ಕುಟುಂಬವು ಓಹಿಯೋದ ಸಿನ್ಸಿನಾಟಿಯಲ್ಲಿ ನೆಲೆಸಿದೆ.