ಮಾಧ್ಯಮ ವರದಿಗಳ ಬೆನ್ನಲ್ಲೇ ಲಲಿತ್ ಮೋದಿ ಪಾಸ್ಪೋರ್ಟ್ ರದ್ದುಗೊಳಿಸಲು ವನೂಆಟು ಪ್ರಧಾನಿ ಆದೇಶ

ಲಲಿತ್ ಮೋದಿ (Photo: Instagram/ @lalitkmodi)
ಪೋರ್ಟ್ ವಿಲಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರಿಗೆ ನೀಡಲಾದ ವನವಾಟು ಪಾಸ್ಪೋರ್ಟ್ ರದ್ದುಗೊಳಿಸಲು ವನೂಆಟು ಪ್ರಧಾನಿ ಜೋಥಮ್ ನಪತ್ ಆದೇಶಿಸಿದ್ದಾರೆ. ವನೂಆಟು ಪೌರತ್ವವನ್ನು ಪಡೆಯಲು ಮೋದಿ ತಮ್ಮ ಭಾರತೀಯ ಪಾಸ್ಪೋರ್ಟ್ ಅನ್ನು ಒಪ್ಪಿಸಲು ಅರ್ಜಿ ಸಲ್ಲಿಸಿದ ಎರಡು ದಿನಗಳ ನಂತರ ಸೋಮವಾರ ಈ ನಿರ್ದೇಶನ ಬಂದಿದೆ.
ಇತ್ತೀಚಿನ ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ನಂತರ ಮೋದಿ ಅವರ ಪಾಸ್ಪೋರ್ಟ್ ಅನ್ನು ರದ್ದುಗೊಳಿಸುವಂತೆ ಪ್ರಧಾನಿ ನಪತ್ ಪೌರತ್ವ ಆಯೋಗಕ್ಕೆ ಸೂಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
"ಇಂಟರ್ಪೋಲ್ ಸ್ಕ್ರೀನಿಂಗ್ಗಳು ಸೇರಿದಂತೆ ಎಲ್ಲಾ ಪ್ರಮಾಣಿತ ಹಿನ್ನೆಲೆ ಪರಿಶೀಲನೆಯ ಬಳಿಕವೂ ಅವರ ಅರ್ಜಿಯ ಸಮಯದಲ್ಲಿ ಯಾವುದೇ ಕ್ರಿಮಿನಲ್ ಅಪರಾಧ ಸಾಬೀತಾಗಿಲ್ಲ. ಆದರೆ, ಕಳೆದ 24 ಗಂಟೆಗಳಲ್ಲಿ ಇಂಟರ್ಪೋಲ್ ಲಲಿತ್ ಮೋದಿ ಅವರ ವಿರುದ್ಧ ಎಚ್ಚರಿಕೆ ನೋಟಿಸ್ ನೀಡುವಂತೆ ಭಾರತೀಯ ಅಧಿಕಾರಿಗಳ ವಿನಂತಿಗಳನ್ನು ಸಾಕಷ್ಟು ನ್ಯಾಯಾಂಗ ಪುರಾವೆಗಳಿಲ್ಲ ಎಂದು ಎರಡು ಬಾರಿ ತಿರಸ್ಕರಿಸಿದೆ ಎಂದು ನನಗೆ ತಿಳಿದುಬಂದಿದೆ. ಅಂತಹ ಯಾವುದೇ ಎಚ್ಚರಿಕೆಯು ಲಲಿತ್ ಮೋದಿ ಅವರ ಪೌರತ್ವ ಅರ್ಜಿಯನ್ನು ಸ್ವಯಂಚಾಲಿತವಾಗಿ ತಿರಸ್ಕರಿಸಲು ಕಾರಣವಾಗುತ್ತಿತ್ತು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವನೂಆಟು ಪಾಸ್ಪೋರ್ಟ್ ಹೊಂದಿರುವುದು ಒಂದು ಸವಲತ್ತು. ಅದು ಹಕ್ಕಲ್ಲ. ಕಾನೂನುಬದ್ಧ ಮಾರ್ಗಗಳ ಮೂಲಕ ಅಲ್ಲಿನ ಪೌರತ್ವವನ್ನು ಪಡೆಯಬೇಕು ಎಂದು ನಪತ್ ಒತ್ತಿ ಹೇಳಿದರು.
ಭಾರತೀಯ ಅಧಿಕಾರಿಗಳು ಲಲಿತ್ ಮೋದಿ ವಿರುದ್ಧ ಪ್ರಕರಣ ಮುಂದುವರಿಸಿದ್ದಾರೆ. ಶುಕ್ರವಾರ, ಭಾರತದ ವಿದೇಶಾಂಗ ಸಚಿವಾಲಯ(MEA)ವು ಲಲಿತ್ ಮೋದಿ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿ ತಮ್ಮ ಭಾರತೀಯ ಪಾಸ್ಪೋರ್ಟ್ ಅನ್ನು ಒಪ್ಪಿಸಲು ಅರ್ಜಿ ಸಲ್ಲಿಸಿದ್ದಾರೆ ಎಂದು ದೃಢಪಡಿಸಿದೆ.
"ಲಲಿತ್ ಮೋದಿ ಲಂಡನ್ನ ಭಾರತೀಯ ಹೈಕಮಿಷನ್ನಲ್ಲಿ ತಮ್ಮ ಪಾಸ್ಪೋರ್ಟ್ ಒಪ್ಪಿಸಲು ಅರ್ಜಿ ಸಲ್ಲಿಸಿದ್ದಾರೆ. ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಇದನ್ನು ಪರಿಶೀಲಿಸಲಾಗುವುದು. ಅವರು ವನೂಆಟು ಪೌರತ್ವವನ್ನು ಪಡೆದಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಕಾನೂನಿನಡಿಯಲ್ಲಿ ಅಗತ್ಯವಿರುವಂತೆ ನಾವು ಅವರ ವಿರುದ್ಧ ಪ್ರಕರಣವನ್ನು ಮುಂದುವರಿಸುತ್ತೇವೆ" ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.
ಐಪಿಎಲ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೋಟ್ಯಂತರ ರೂಪಾಯಿಗಳ ಹಣಕಾಸಿನ ಅಕ್ರಮಗಳ ಆರೋಪದ ಮೇಲೆ ಲಲಿತ್ ಮೋದಿ ಅವರನ್ನು ಭಾರತೀಯ ಕಾನೂನು ಜಾರಿ ಸಂಸ್ಥೆಗಳು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿವೆ.