ವೆನೆಝುವೆಲಾ | ಚುನಾವಣಾ ಫಲಿತಾಂಶ ವಿರೋಧಿಸಿ ವ್ಯಾಪಕ ಪ್ರತಿಭಟನೆ
►ಅಶ್ರುವಾಯು, ರಬ್ಬರ್ ಬುಲೆಟ್ ಪ್ರಯೋಗಿಸಿದ ಭದ್ರತಾ ಪಡೆ ►ಓರ್ವ ಮೃತ್ಯು; 46 ಮಂದಿಯ ಬಂಧನ ►ದೇಶ ತೊರೆಯಲು ವೆನೆಝುವೆಲಾ ರಾಜತಾಂತ್ರಿಕರಿಗೆ ಪೆರು ಆದೇಶ
PC : PTI
ಕ್ಯಾರಕಾಸ್ : ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋಗೆ ಮೂರನೇ ಅವಧಿಗೆ ಅಧಿಕಾರ ನೀಡಿದ ವಿವಾದಿತ ಚುನಾವಣಾ ಫಲಿತಾಂಶದಿಂದ ಪ್ರಚೋದಿಸಲ್ಪಟ್ಟ ಪ್ರತಿಭಟನೆಯನ್ನು ನಿಯಂತ್ರಿಸಲು ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. 46 ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ವೆನೆಝುವೆಲಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ನಿಕೊಲಸ್ ಮಡುರೊ 51.2%ದಷ್ಟು ಮತಗಳನ್ನು ಪಡೆದು ಮರು ಆಯ್ಕೆಗೊಂಡಿರುವುದಾಗಿ ಚುನಾವಣಾ ಆಯೋಗ ರವಿವಾರ ಘೋಷಿಸಿದೆ. ವಿಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿ ಎಡ್ಮಂಡೊ ಗೊನ್ಸಾಲ್ವಿಸ್ ಉರೂಷಿಯಾ 44.2% ಮತಗಳನ್ನು ಪಡೆದಿದ್ದಾರೆ ಎಂದು ಆಯೋಗ ಹೇಳಿತ್ತು. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಎಡ್ಮಂಡೊ ಗೊನ್ಸಾಲ್ವಿಸ್ ಗೆಲುವು ಬಹುತೇಕ ನಿಶ್ಚಿತ ಎಂದು ಭವಿಷ್ಯ ನುಡಿದಿದ್ದವು.
ಎಡ್ಮಂಡೊ ಗೊನ್ಸಾಲ್ವಿಸ್ 70% ಮತ ಪಡೆದಿದ್ದಾರೆ. ಆದರೆ ಮಡುರೊಗೆ ನಿಷ್ಟರಾಗಿರುವ ಚುನಾವಣಾ ಆಯೋಗ ಫಲಿತಾಂಶವನ್ನು ತಿರುಚಿದೆ. ಗೆಲುವು ನಮ್ಮದೇ ಎಂದು ವಿಪಕ್ಷಗಳ ಮೈತ್ರಿಕೂಟ ಪ್ರತಿಪಾದಿಸಿದ್ದು ಆಯೋಗ ಘೋಷಿಸಿರುವ ಫಲಿತಾಂಶವನ್ನು ತಿರಸ್ಕರಿಸುವುದಾಗಿ ಹೇಳಿತ್ತು ಮತ್ತು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು.
ಹಲವು ದೇಶಗಳೂ ಫಲಿತಾಂಶವನ್ನು ಪ್ರಶ್ನಿಸಿವೆ. ಲಭ್ಯವಿರುವ ಮತದಾನದ ದಾಖಲೆಗಳ ಪರಿಶೀಲನೆಯು ಮುಂದಿನ ಅಧ್ಯಕ್ಷ ಎಡ್ಮಂಡೊ ಗೊನ್ಸಾಲ್ವೆಸ್ ಎಂದು ಸ್ಪಷ್ಟವಾಗಿ ತೋರಿಸಿವೆ ಎಂದು ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾದೊ ಪ್ರತಿಪಾದಿಸಿದ್ದಾರೆ.
ಫಲಿತಾಂಶವನ್ನು ವಿರೋಧಿಸಿ ರಾಜಧಾನಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮಡುರೊ ಅವರ ಪ್ರಚಾರ ಕಾರ್ಯದ ಪೋಸ್ಟರ್ ಗಳನ್ನು ಕಿತ್ತೆಸೆದು ಬೆಂಕಿಹಚ್ಚಿ ಸರಕಾರಿ ವಿರೋಧಿ ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆ ಅಶ್ರುವಾಯು ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿದಾಗ ಓರ್ವ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿದ್ದಾರೆ. 61 ವರ್ಷದ ಮಡುರೊ 2031ರವರೆಗೆ ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿರುವುದಾಗಿ ರಾಷ್ಟ್ರೀಯ ಚುನಾವಣಾ ಆಯೋಗ ಪ್ರಮಾಣೀಕರಿಸಿದೆ.
ವಿಶ್ವಸಂಸ್ಥೆ, ಅಮೆರಿಕ, ಯುರೋಪಿಯನ್ ಯೂನಿಯನ್ ಹಾಗೂ ಹಲವು ಲ್ಯಾಟಿನ್ ಅಮೆರಿಕನ್ ದೇಶಗಳು ಪಾರರ್ದಶಕ ಪ್ರಕ್ರಿಯೆಗೆ ಕರೆ ನೀಡಿದ್ದರೆ, ಚೀನಾ, ರಶ್ಯ ಮತ್ತು ಕ್ಯೂಬಾ ದೇಶಗಳು ಮಡುರೋರನ್ನು ಅಭಿನಂದಿಸಿವೆ. ಸ್ವತಂತ್ರ ಚುನಾವಣಾ ವೀಕ್ಷಕರ ಉಪಸ್ಥಿತಿಯಲ್ಲಿ ಫಲಿತಾಂಶಗಳ ಸಂಪೂರ್ಣ ಪರಿಶೀಲನೆ ನಡೆಸುವಂತೆ 9 ಲ್ಯಾಟಿನ್ ಅಮೆರಿಕನ್ ದೇಶಗಳು ಆಗ್ರಹಿಸಿವೆ. ಮತದಾನ ಕೇಂದ್ರ ಹಂತದ ಫಲಿತಾಂಶಗಳನ್ನು ತಕ್ಷಣ ವಿವರವಾಗಿ ಪ್ರಕಟಿಸುವಂತೆ ಬ್ರೆಝಿಲ್ ಮತ್ತು ಕೊಲಂಬಿಯಾ ಒತ್ತಾಯಿಸಿವೆ. ಚುನಾವಣಾ ಫಲಿತಾಂಶವನ್ನು ನಂಬಲು ಕಷ್ಟವಾಗಿದೆ ಎಂದು ಚಿಲಿ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ. ವೆನೆಝುವೆಲಾ ಚುನಾವಣಾ ಆಯೋಗ ಪ್ರಕಟಿಸಿದ ಫಲಿತಾಂಶವನ್ನು ಅರ್ಜೆಂಟೀನಾ ಪ್ರಶ್ನಿಸಿದೆ.
PC : PTI
ದೇಶ ತೊರೆಯಲು ವೆನೆಝುವೆಲಾ ರಾಜತಾಂತ್ರಿಕರಿಗೆ ಪೆರು ಆದೇಶ
ವೆನೆಝುವೆಲಾದ ವಿವಾದಾತ್ಮಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ, ದೇಶವನ್ನು ತೊರೆಯಲು ವೆನೆಝುವೆಲಾ ರಾಜತಾಂತ್ರಿಕರಿಗೆ ಪೆರು ದೇಶ ಆದೇಶಿಸಿದೆ.
ವೆನೆಝುವೆಲಾ ಆಡಳಿತವು ಕೈಗೊಂಡ ಗಂಭೀರ ಪರಿಣಾಮ ಬೀರುವ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಪೆರು ವಿದೇಶಾಂಗ ಇಲಾಖೆ ಘೋಷಿಸಿದೆ. ವೆನೆಝುವೆಲಾ ಜನರ ಜನಪ್ರಿಯ ಇಚ್ಛೆಯ ಉಲ್ಲಂಘನೆಯನ್ನು ಒಪ್ಪಿಕೊಳ್ಳದ ಕಾರಣ ತನ್ನ ರಾಯಭಾರಿಯನ್ನು ವಾಪಾಸು ಕರೆದುಕೊಳ್ಳುವುದಾಗಿ ಪೆರು ಸರಕಾರ ಘೋಷಿಸಿದೆ. ವೆನೆಝುವೆಲಾ ಜತೆಗಿನ ಸಂಬಂಧಗಳನ್ನು ಅಮಾನತುಗೊಳಿಸುವುದಾಗಿ ಪನಾಮಾ ಹೇಳಿದೆ.
ಇದಕ್ಕೆ ವೆನೆಝುವೆಲಾ ತಿರುಗೇಟು ನೀಡಿದ್ದು ಅರ್ಜೆಂಟೀನಾ, ಚಿಲಿ, ಕೋಸ್ಟರಿಕಾ, ಪನಾಮಾ, ಪೆರು, ಡೊಮಿನಿಕನ್ ಗಣರಾಜ್ಯ ಮತ್ತು ಉರುಗ್ವೇ ದೇಶಗಳಿಂದ ರಾಜತಾಂತ್ರಿಕ ಸಿಬ್ಬಂದಿಗಳನ್ನು ವಾಪಾಸು ಕರೆಸಿಕೊಳ್ಳುವುದಾಗಿ ಹೇಳಿದೆ. ಅಲ್ಲದೆ ಪನಾಮಾ ಮತ್ತು ಡೊಮಿನಿಕ್ ಗಣರಾಜ್ಯಕ್ಕೆ ಪ್ರಯಾಣಿಸುವ ಮತ್ತು ಅಲ್ಲಿಂದ ಬರುವ ಎಲ್ಲಾ ವಿಮಾನಗಳನ್ನೂ ಅಮಾನತುಗೊಳಿಸಿದೆ.