ವೆನೆಝುವೆಲಾ: ಬಂಧನದಲ್ಲಿದ್ದ ಆರು ಅಮೆರಿಕನ್ನರ ಬಿಡುಗಡೆ

PC | Richard Grenell/X
ಕ್ಯಾರಕಾಸ್: ಕೆಲವು ತಿಂಗಳಿನಿಂದ ವೆನೆಝುವೆಲಾದಲ್ಲಿ ಬಂಧನದಲ್ಲಿದ್ದ 6 ಅಮೆರಿಕನ್ನರನ್ನು ಅಧ್ಯಕ್ಷ ನಿಕೋಲಸ್ ಮಡುರೊ ಸರಕಾರ ಬಿಡುಗಡೆಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿ ರಿಚರ್ಡ್ ಗ್ರೆನೆಲ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಅಮೆರಿಕದಲ್ಲಿ ಅಪರಾಧ ಕೃತ್ಯ ಎಸಗಿರುವ ವೆನೆಝುವೆಲಾ ಮೂಲದ ವಲಸಿಗರನ್ನು ಗಡೀಪಾರು ಮಾಡಿದ್ದು ಅವರನ್ನು ದೇಶದೊಳಗೆ ಕರೆಸಿಕೊಳ್ಳುವಂತೆ ವೆನೆಝುವೆಲಾ ಅಧಿಕಾರಿಗಳನ್ನು ಅಮೆರಿಕ ಆಗ್ರಹಿಸಿದೆ.
ಬಂಧನದಲ್ಲಿದ್ದ ಅಮೆರಿಕನ್ನರ ಬಿಡುಗಡೆಗೆ ಸಂಬಂಧಿಸಿ ಟ್ರಂಪ್ ಗರಿಷ್ಟ ಒತ್ತಡ ಪ್ರಕ್ರಿಯೆ ಮುಂದುವರಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ವಿಶೇಷ ಕಾರ್ಯಾಚರಣೆಗೆ ಟ್ರಂಪ್ ಅವರ ಪ್ರತಿನಿಧಿ ರಿಚರ್ಡ್ ಗ್ರೆನೆಲ್ ಶುಕ್ರವಾರ ವೆನೆಝುವೆಲಾಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದರು. ಕಳೆದ ವರ್ಷ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿರುವುದಾಗಿ ಘೋಷಿಸಿಕೊಂಡಿದ್ದ ಮಡುರೊ ಮೂರನೇ ಅವಧಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಅಮೆರಿಕ ಹಾಗೂ ಇತರ ಹಲವು ಪಾಶ್ಚಿಮಾತ್ಯ ದೇಶಗಳು ಮಡುರೊ ಗೆಲುವನ್ನು ಮಾನ್ಯ ಮಾಡಲು ನಿರಾಕರಿಸಿವೆ. ವೆನೆಝುವೆಲಾದ ವಿಪಕ್ಷಗಳೂ ತಮ್ಮ ಅಭ್ಯರ್ಥಿ ಎಡ್ಮಂಡೊ ಗೊನ್ಸಾಲೆಝ್ ಸ್ಪಷ್ಟ ಗೆಲುವು ದಾಖಲಿಸಿರುವುದಾಗಿ ಪ್ರತಿಪಾದಿಸಿವೆ.