ವಿಯೆಟ್ನಾಮ್ | ಚಂಡಮಾರುತ ; ಮೃತರ ಸಂಖ್ಯೆ 59ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ | PTI
ಹನೋಯಿ : ವಿಯೆಟ್ನಾಮ್ನಲ್ಲಿ ವ್ಯಾಪಕ ನಾಶ-ನಷ್ಟಕ್ಕೆ ಕಾರಣವಾಗಿರುವ ಯಾಗಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 59ಕ್ಕೆ ಏರಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಕನಿಷ್ಠ 24 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
ಗಂಟೆಗೆ 149 ಕಿ.ಮೀ ವೇಗದ ಗಾಳಿಯೊಂದಿಗೆ ಶನಿವಾರ ಉತ್ತರ ವಿಯೆಟ್ನಾಮ್ನ ಕರಾವಳಿಗೆ ಅಪ್ಪಳಿಸಿದ್ದ ಚಂಡಮಾರುತ ಕ್ರಮೇಣ ದೇಶದ ಇತರ ಪ್ರಾಂತಗಳಿಗೆ ವ್ಯಾಪಿಸಿದ್ದು ಹಲವಾರು ಸೇತುವೆಗಳು ಕುಸಿದು ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ಮನೆಗಳ ಛಾವಣಿಗಳು ಗಾಳಿಯಲ್ಲಿ ಹಾರಿಹೋಗಿವೆ. ಕರಾವಳಿ ತೀರದಲ್ಲಿರುವ ಕೈಗಾರಿಕಾ ನಗರ ಹೈಪಾಂಗ್ನಲ್ಲಿ ಹಲವು ಕೈಗಾರಿಕೆಗಳ ಕಟ್ಟಡಗಳಿಗೆ ನೀರು ನುಗ್ಗಿದೆ. ಎರಡು ದಿನಗಳಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು ಫ್ಯಾಕ್ಟರಿಗಳ ಗೋದಾಮು ಕೂಡಾ ಜಲಾವೃತಗೊಂಡು ಭಾರೀ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಪ್ರವಾಹ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು ಜಲಾಶಯಗಳಿಂದ ನೀರನ್ನು ಹೊರಬಿಡುವಂತೆ ಸೂಚಿಸಲಾಗಿದೆ. ನದಿಯಲ್ಲಿನ ನೀರಿನ ಮಟ್ಟ ಹಠಾತ್ ಏರಿಕೆಯಾಗುವ ಸಾಧ್ಯತೆಯಿರುವುದರಿಂದ ಸ್ಥಳೀಯ ನಿವಾಸಿಗಳು ಎಚ್ಚರದಿಂದ ಇರಬೇಕು ಎಂದು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸಹಾಯಕ ಸಚಿವ ನುಯೆನ್ ಹ್ವಾಂಗ್ ಹೈಪ್ ಹೇಳಿದ್ದಾರೆ.
ಉತ್ತರದ ಫು ಥೊ ಪ್ರಾಂತದಲ್ಲಿ ಕೆಂಪು ನದಿಯ ನೀರು ಅಪಾಯದ ಮಟ್ಟ ಮೀರಿ ಹರಿದ ಬಳಿಕ ನದಿಗೆ ಕಟ್ಟಲಾದ 375 ಮೀಟರ್ ಉದ್ದದ ಸೇತುವೆ ಕುಸಿದು ಬಿದ್ದಿದೆ. 10 ಕಾರು ಮತ್ತು ಟ್ರಕ್ಗಳು, ಎರಡು ಬೈಕ್ಗಳು ಈ ಸಂದರ್ಭ ನದಿಗೆ ಬಿದ್ದಿದ್ದು ಕನಿಷ್ಠ 24 ಮಂದಿ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ.
ನೆರೆಯ ಯೆನ್ ಬಾಯ್ ಪ್ರಾಂತದಲ್ಲಿ ಮೂರು ಅಡಿಗಳಷ್ಟು ಪ್ರವಾಹದ ನೀರು ತುಂಬಿದ್ದು ಸುಮಾರು 2,400 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.