ಬಾಂಗ್ಲಾದೇಶ | ಮತ್ತೆ ತೀವ್ರಗೊಂಡ ಹಿಂಸಾಚಾರದಲ್ಲಿ ಕನಿಷ್ಠ 52 ಮಂದಿ ಮೃತ್ಯು
100ಕ್ಕೂ ಅಧಿಕ ಮಂದಿಗೆ ಗಾಯ ; ರಾಷ್ಟ್ರಾದ್ಯಂತ ಕರ್ಫ್ಯೂ ಜಾರಿ
PC : NDTV
ಢಾಕಾ : ಪ್ರಧಾನಿ ಶೇಖ್ ಹಸೀನಾರ ರಾಜೀನಾಮೆಗೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ಕಳೆದ 2 ದಿನಗಳಿಂದ ಮುಂದುವರಿದಿರುವ ಪ್ರತಿಭಟನೆ ತೀವ್ರಗೊಂಡಿದ್ದು ರವಿವಾರ ದೇಶದ ಹಲವೆಡೆ ನಡೆದ ಘರ್ಷಣೆ, ಹಿಂಸಾಚಾರದಲ್ಲಿ ಕನಿಷ್ಠ 52 ಮಂದಿ ಸಾವನ್ನಪ್ಪಿದ್ದು 100ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ರವಿವಾರ ಸಂಜೆಯ ವೇಳೆಗೆ ಹಿಂಸಾಚಾರ ಹಲವೆಡೆ ಭುಗಿಲೆದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ರಾಷ್ಟ್ರಾದ್ಯಂತ ಮತ್ತೆ ಕರ್ಫ್ಯೂಜಾರಿಗೊಳಿಸಲಾಗಿದ್ದು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಸರಕಾರ ನಿರ್ಬಂಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿಯ ವಿರುದ್ಧ ಘೋಷಣೆ ಕೂಗುತ್ತಿದ್ದ ಸಾವಿರಾರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗ ವಿಫಲಗೊಂಡ ಬಳಿಕ ಪೊಲೀಸರು ಸ್ಟನ್ ಗ್ರೆನೇಡ್ ಗಳನ್ನು ಬಳಸಿದರು. ಕೇಂದ್ರ ಪ್ರಾಂತದ ಮುನ್ಸಿಗಂಜ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು, ಪೊಲೀಸರು ಮತ್ತು ಆಡಳಿತ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು ಈ ಪ್ರದೇಶದ ಮೂಲಕ ಕೆಲಸಕ್ಕೆ ತೆರಳುತ್ತಿದ್ದ ನಿರ್ಮಾಣ ಕಾರ್ಮಿಕರ ತಂಡದ ಇಬ್ಬರು ಸಾವನ್ನಪ್ಪಿದ್ದು 30ಕ್ಕೂ ಅಧಿಕ ಕಾರ್ಮಿಕರು ಗಾಯಗೊಂಡಿದ್ದಾರೆ. ತಾವು ಗೋಲೀಬಾರ್ ನಡೆಸಿಲ್ಲ ಎಂದು ಪೊಲೀಸರು ಹೇಳಿದ್ದು ಹಲವು ಸುಧಾರಿತ ಸ್ಫೋಟಕ ಸಾಧನಗಳು ಸ್ಫೋಟಗೊಂಡು ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ.
ಈಶಾನ್ಯ ಪ್ರಾಂತದ ಪಾಬ್ನಾ ಜಿಲ್ಲೆಯ ಪ್ರಮುಖ ಹೆದ್ದಾರಿಗಳಲ್ಲಿ ರಸ್ತೆ ತಡೆ ನಡೆಸಿದ್ದು ಇಲ್ಲಿ ಪ್ರತಿಭಟನಾಕಾರರು ಮತ್ತು ಆಡಳಿತ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು 50 ಮಂದಿ ಗಾಯಗೊಂಡಿದ್ದಾರೆ. ಉತ್ತರದ ಬೊಗೌರ ಜಿಲ್ಲೆಯ ಬಂಗಬಂಧು ಶೇಖ್ ಮುಜೀಬ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ಗುಂಪೊಂದು ದಾಂಧಲೆ ನಡೆಸಿದ್ದು ಇಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.