ಬಂಡುಗೋರರ ತೀವ್ರ ದಾಳಿ: ಬಾಂಗ್ಲಾಕ್ಕೆ ಪಲಾಯನ ಮಾಡಿದ ಮ್ಯಾನ್ಮಾರ್ ಯೋಧರು
Photo : (Shafiqur Rahman/AP)
ಢಾಕ: ಕಳೆದ ಕೆಲ ದಿನಗಳಿಂದ ಬಾಂಗ್ಲಾದೇಶ- ಮ್ಯಾನ್ಮಾರ್ನ ಗಡಿಭಾಗದಲ್ಲಿ ಬಂಡುಗೋರ ಪಡೆಯ ದಾಳಿ ಹೆಚ್ಚಿದ್ದು ಮ್ಯಾನ್ಮಾರ್ ಗಡಿಭದ್ರತಾ ಪಡೆಯ ಕನಿಷ್ಟ 95 ಯೋಧರು ಗಡಿದಾಟಿ ಬಾಂಗ್ಲಾಕ್ಕೆ ಪಲಾಯನ ಮಾಡಿರುವುದಾಗಿ ವರದಿಯಾಗಿದೆ.
2021ರಲ್ಲಿ ಕ್ಷಿಪ್ರದಂಗೆಯ ಮೂಲಕ ಅಧಿಕಾರ ವಶಕ್ಕೆ ಪಡೆದಂದಿನಿಂದಲೂ ಮ್ಯಾನ್ಮಾರ್ನ ಸೇನಾಡಳಿತದ ವಿರುದ್ಧ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಈ ಮಧ್ಯೆ, ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಹಲವು ಪ್ರಮುಖ ಪಟ್ಟಣಗಳನ್ನು ಮತ್ತು ಸೇನಾನೆಲೆಗಳನ್ನು ಬಂಡುಗೋರ ಪಡೆ ವಶಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಪರ ಪಕ್ಷಗಳು ಪರ್ಯಾಯ ಸರಕಾರ ಸ್ಥಾಪಿಸಿರುವುದು ಸೇನಾಡಳಿತಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಈ ಮಧ್ಯೆ, ಮ್ಯಾನ್ಮಾರ್ ಗಡಿಭದ್ರತಾ ಪಡೆ(ಬಿಜಿಪಿ)ಯ ಸುಮಾರು 95 ಯೋಧರು(ಇವರಲ್ಲಿ 15 ಯೋಧರು ತೀವ್ರ ಗಾಯಗೊಂಡಿದ್ದಾರೆ) ತಮ್ಮ ಆಯುಧ ಸಹಿತ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಗಾಯಗೊಂಡವರನ್ನು ಬಾಂಗ್ಲಾದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಬಾಂಗ್ಲಾ ಗಡಿಭದ್ರತಾ ಪಡೆಯ ವಕ್ತಾರ ಶರೀಫುಲ್ ಇಸ್ಲಾಂ ಹೇಳಿದ್ದಾರೆ.