ಮರಾಠಾ ಪ್ರತಿಭಟನೆ: ಹಿಂಸಾಚಾರ ಪೀಡಿತ ಬೀಡ್ ನಲ್ಲಿ ಸಮಾವೇಶಗಳಿಗೆ ನಿಷೇಧ, ಇಂಟರ್ನೆಟ್ ನಿಷೇಧ
Photo : PTI
ಬೀಡ್ (ಮಹಾರಾಷ್ಟ್ರ): ಸೋಮವಾರ ಮರಾಠಾ ಮೀಸಲಾತಿಗಾಗಿ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಬೀಡ್ ನಗರದಲ್ಲಿ ಮಂಗಳವಾರ ವ್ಯಾಪಕ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದ್ದು, ಹೊಸದಾಗಿ ಹಿಂಸಾಚಾರ ಸಂಭವಿಸುವುದನ್ನು ತಡೆಯಲು ಹಲವಾರು ಅಂಗಡಿಗಳನ್ನು ಮುಚ್ಚಲಾಗಿದೆ. ನಗರದಲ್ಲಿ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.
ಮರಾಠಾ ಸಮುದಾಯದ ಬೇಡಿಕೆಗಳನ್ನು ಪರಿಶೀಲಿಸಲು ಸರಕಾರವು ಸಮಿತಿಯೊಂದನ್ನು ರಚಿಸಿದೆಯಾದರೂ ನಿನ್ನೆ ಉದ್ರಿಕ್ತ ಪ್ರತಿಭಟನಾಕಾರರು ಇಬ್ಬರು ಎನ್ಸಿಪಿ ಶಾಸಕರ ನಿವಾಸಗಳಿಗೆ ಹಾನಿಯನ್ನುಂಟು ಮಾಡಿ ಎನ್ಸಿಪಿ ಕಚೇರಿಗೆ ಬೆಂಕಿ ಹಚ್ಚಿದ್ದರು.
ಮಂಗಳವಾರ ಬೆಳಿಗ್ಗೆ ನಗರದ ಹಲವಾರು ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಇರಿಸಲಾಗಿದ್ದು, ಯಾವುದೇ ಕೆಲಸವಿಲ್ಲದೆ ಸಂಚರಿಸುತ್ತಿದ್ದ ವಾಹನ ಸವಾರರನ್ನು ಚೆಕ್ ಪೋಸ್ಟ್ ಗಳಲ್ಲಿಯೇ ತಡೆದು ನಿಲ್ಲಿಸಲಾಗಿತ್ತು. ಸೋಮವಾರ ಪ್ರತಿಭಟನಾಕಾರರು ಸುಟ್ಟು ಹಾಕಿದ್ದ ಟೈರ್ ಗಳು ಮತ್ತು ವಾಹನಗಳ ಕುರುಹುಗಳು ಇನ್ನೂ ರಸ್ತೆಗಳಲ್ಲಿಯೇ ಉಳಿದುಕೊಂಡಿವೆ.
ಸೋಮವಾರ ಸಂಜೆ ಬಸ್ ಡಿಪೋಕ್ಕೆ ನುಗ್ಗಿದ್ದ ಸಾವಿರಕ್ಕೂ ಅಧಿಕ ಜನರ ಗುಂಪು ಅಲ್ಲಿದ್ದ 50ಕ್ಕೂ ಅಧಿಕ ಬಸ್ಗಳಿಗೆ ಹಾನಿಯನ್ನುಂಟು ಮಾಡಿದ್ದು,ಒಂದು ಬಸ್ಗೆ ಬೆಂಕಿಯನ್ನು ಹಚ್ಚಲೂ ಪ್ರಯತ್ನಿಸಿದ್ದರು. ಕಂಟ್ರೋಲ್ ಕ್ಯಾಬಿನ್ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಲಾಗಿದೆ. ಒಟ್ಟು ಸುಮಾರು 70 ಲ.ರೂ.ಗಳ ಹಾನಿ ಸಂಭವಿಸಿದೆ ಎಂದು ಜಿಲ್ಲಾ ಸಾರಿಗೆ ಅಧಿಕಾರಿ ಅಜಯಕುಮಾರ ಮೋರೆ ತಿಳಿಸಿದರು.