ವೀಸಾ ವಂಚನೆ : ಇಬ್ಬರು ಭಾರತೀಯರ ವಿರುದ್ಧ ದೋಷಾರೋಪಣೆ
ಸಾಂದರ್ಭಿಕ ಚಿತ್ರ | Photo: PTI
ನ್ಯೂಯಾರ್ಕ್: ಅಮೆರಿಕದಲ್ಲಿ ವೀಸಾ ವಂಚನೆ ಪಿತೂರಿ ಪ್ರಕರಣದಲ್ಲಿ ಬಂಧನದಲ್ಲಿರುವ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳ ವಿರುದ್ಧ ಫೆಡರಲ್ ನ್ಯಾಯಾಧೀಶರು ದೋಷಾರೋಪಣೆ ಮಾಡಿದ್ದಾರೆ ಎಂದು ವರದಿಯಾಗಿದೆ.
36 ವರ್ಷದ ರಾಮ್ಭಾಯ್ ಪಟೇಲ್ ಮತ್ತು 39 ವರ್ಷದ ಬಲ್ವೀಂದರ್ ಸಿಂಗ್ ವಿರುದ್ಧ ತಲಾ 1 ಕೌಂಟ್ ಅಪರಾಧದ ದೋಷಾರೋಪಣೆ ಮಾಡಲಾಗಿದೆ. ಬಾಸ್ಟನ್ ಮತ್ತು ಮಸಚುಸೆಟ್ಸ್ನಲ್ಲಿ ವೀಸಾ ವಂಚನೆ ನಡೆಸಲು ಪಿತೂರಿ ಹೂಡಿದ್ದ ಆರೋಪದಲ್ಲಿ ಕಳೆದ ವರ್ಷದ ಡಿಸೆಂಬರ್ ನಲ್ಲಿ ಪಟೇಲ್ನನ್ನು ಸಿಯಾಟೆಲ್ನಲ್ಲಿ ಮತ್ತು ಸಿಂಗ್ನನ್ನು ಕ್ವೀನ್ಸ್ ನಗರದಲ್ಲಿ ಬಂಧಿಸಲಾಗಿದೆ.
ಇವರಿಬ್ಬರು ಸೇರಿಕೊಂಡು ಅಮೆರಿಕಾದ್ಯಂತದ ಹೋಟೆಲ್ಗಳು ಹಾಗೂ ಬಾರ್ ಗಳಲ್ಲಿ ಪೂರ್ವನಿಯೋಜಿತ ಸಶಸ್ತ್ರ ದರೋಡೆ ಕೃತ್ಯಗಳನ್ನು ನಡೆಸಿದ್ದರು. ಆ ಸಂದರ್ಭ ಹೋಟೆಲ್, ಬಾರ್ ಗಳಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಶಿಯರ್ ಗಳಿಗೆ ಅಮೆರಿಕದ ವಿಶೇಷ ಯು-ವೀಸಾ ದೊರಕಿಸಿಕೊಡುವುದು ಈ ದರೋಡೆಯ ಉದ್ದೇಶವಾಗಿತ್ತು. ( ಅಪರಾಧ ಪ್ರಕರಣಗಳಲ್ಲಿ ಮಾನಸಿಕ ಅಥವಾ ದೈಹಿಕ ಹಿಂಸೆಗೆ ಒಳಗಾದವರಿಗೆ, ಅಥವಾ ಅಪರಾಧ ಪ್ರಕರಣಗಳ ವಿಚಾರಣೆಯಲ್ಲಿ ಪ್ರತ್ಯಕ್ಷ ಸಾಕ್ಷಿದಾರರಿಗೆ ಯು- ವೀಸಾ ವಿಭಾಗದಡಿ ವೀಸಾ ದೊರಕುತ್ತದೆ).
ಪಟೇಲ್ ಮತ್ತು ಸಿಂಗ್ ರೂಪಿಸಿದ್ದ ದರೋಡೆ ಪ್ರಕರಣದಲ್ಲಿ , ಸಶಸ್ತ್ರ ದರೋಡೆಕೋರರು ಹೋಟೆಲ್ನ ಕ್ಯಾಷಿಯರ್ನನ್ನು ಗನ್ ತೋರಿಸಿ ಬೆದರಿಸಿ ಹಣ ಪಡೆಯುತ್ತಿದ್ದರು. ದರೋಡೆಕೋರರು ಅಲ್ಲಿಂದ ಪರಾರಿಯಾಗುವ ನಿಟ್ಟಿನಲ್ಲಿ 5 ನಿಮಿಷ ಕಾದ ಬಳಿಕ ಕ್ಯಾಷಿಯರ್ ಗಳು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಹೀಗೆ ಯು-ವೀಸಾ ಪಡೆಯುವ ಕ್ಯಾಶಿಯರ್ ಗಳು ಪಟೇಲ್ ಮತ್ತು ಸಿಂಗ್ಗೆ ಕಮಿಷನ್ ನೀಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.