ಇಂಡೋನೇಶ್ಯದಲ್ಲಿ ಜ್ವಾಲಾಮುಖಿ ಸ್ಫೋಟ : 2,100 ಜನರ ಸ್ಥಳಾಂತರ
PC : PTI
ಜಕಾರ್ತ (ಇಂಡೋನೇಶ್ಯ): ಇಂಡೋನೇಶ್ಯದ ಸುಲವೆಸಿ ದ್ವೀಪದಲ್ಲಿ ಸ್ಫೋಟಿಸುತ್ತಿರುವ ಜ್ವಾಲಾಮುಖಿಯೊಂದರ ಸಮೀಪ ವಾಸಿಸುತ್ತಿರುವ 2,100ಕ್ಕೂ ಅಧಿಕ ಜನರನ್ನು ಶುಕ್ರವಾರ ಸ್ಥಳಾಂತರಿಸಲಾಗಿದೆ. ಆಕಾಶದಲ್ಲಿ ಹಬ್ಬುತ್ತಿರುವ ಬೂದಿ, ಉರುಳುತ್ತಿರುವ ಬಂಡೆಗಳು, ಜ್ವಾಲಾಮುಖಿಯ ಬಿಸಿ ಮೋಡಗಳು ಮತ್ತು ಸಂಭಾವ್ಯ ಸುನಾಮಿ ಅಪಾಯಗಳ ಹಿನ್ನೆಲೆಯಲ್ಲಿ ಸರಕಾರವು ಈ ಕ್ರಮ ತೆಗೆದುಕೊಂಡಿದೆ.
ಶುಕ್ರವಾರ ಮಧ್ಯಾಹ್ಯದ ಬಳಿಕ ಈ ಜ್ವಾಲಾಮುಖಿಯಲ್ಲಿ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಇಂಡೋನೇಶ್ಯದ ಜ್ವಾಲಾಮುಖಿ ಮತ್ತು ಭೌಗೋಳಿಕ ವಿಪತ್ತು ತಡೆ ಕೇಂದ್ರವು ತಿಳಿಸಿದೆ. ಈ ಪೈಕಿ ಒಂದು ಸ್ಫೋಟವು 1,200 ಮೀಟರ್ಗೂ ಅಧಿಕ ಎತ್ತರಕ್ಕೆ ಚಿಮ್ಮಿದೆ.
ಜ್ವಾಲಾಮುಖಿಯ ಬೂದಿ ಗಾಳಿಯಲ್ಲಿ ಸೇರಿರುವುದರಿಂದ ‘ಮೌಂಟ್ ರುವಾಂಗ್’ ಜ್ವಾಲಾಮುಖಿಯಿಂದ ಸುಮಾರು 100 ಕಿ.ಮೀ. ದೂರದ ಮನಾಡೊ ನಗರದಲ್ಲಿರುವ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಜ್ವಾಲಾಮುಖಿಯ ಬೂದಿಯು ಪಶ್ಚಿಮ, ವಾಯುವ್ಯ, ಈಶಾನ್ಯ ಮತ್ತು ಆಗ್ನೇಯ ದಿಕ್ಕುಗಳಿಗೆ ಚದುರಿದ್ದು, ಮನಾಡೊ ಮತ್ತು ಉತ್ತರ ಮಿನಹಸಗಳ ಆಕಾಶವನ್ನು ವ್ಯಾಪಿಸಿದೆ ಎಂದು ಇಂಡೋನೇಶ್ಯದ ಸಾರಿಗೆ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.
‘‘ನಾವು ಈಗಲೂ ಮೌಂಟ್ ರುವಾಂಗ್ ಜ್ವಾಲಾಮುಖ ಸ್ಫೋಟದ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದೇವೆ. ವಿಮಾನ ಸುರಕ್ಷತೆ ಮತ್ತು ಹಿತವನ್ನು ಖಾತರಿಪಡಿಸುವುದಕ್ಕಾಗಿ ಸಂಬಂಧಪಟ್ಟವರೊಂದಿಗೆ ಸಮನ್ವಯ ಸಾಧಿಸಿದ್ದೇವೆ’’ ಎಂದು ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥ ಅಂಬರ್ ಸೂರ್ಯೊಕೊ ತಿಳಿಸಿದರು.
ಜ್ವಾಲಾಮುಖಯ ಸಮೀಪದಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ 11,000ಕ್ಕೂ ಹೆಚ್ಚು ಜನರಿಗೆ ಮನೆ ಬಿಡಲು ಸೂಚಿಸಲಾಗಿದೆ.
ಜ್ವಾಲಾಮುಖಿಯ ಒಂದು ಭಾಗವು ಸಮುದ್ರಕ್ಕೆ ಕುಸಿದು ಸುನಾಮಿ ಉಂಟಾಗುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಚಿಂತಿತರಾಗಿದ್ದಾರೆ. 1871ರಲ್ಲಿ ಈ ರೀತಿಯ ಘಟನೆ ಸಂಭವಿಸಿತ್ತು.