ಇಯು ಸದಸ್ಯತ್ವಕ್ಕೆ 40 ವರ್ಷಗಳಿಂದ ಕಾಯುತ್ತಿದ್ದೇವೆ, ಇನ್ನು ಸಾಧ್ಯವಿಲ್ಲ: ಎರ್ದೋಗನ್
ತಯ್ಯಿಪ್ ಎರ್ದೋಗನ್ | Photo: NDTV
ಅಂಕಾರ : ಯುರೋಪಿಯನ್ ಯೂನಿಯನ್ ಗೆ ಸೇರುವ ಬಗ್ಗೆ ಕಳೆದ 40 ವರ್ಷಗಳಿಂದ ಕಾಯುತ್ತಿದ್ದೇವೆ. ಇನ್ನು ಕಾಯಲಾಗದು. ತಮ್ಮ ದೇಶವು ಐರೋಪ್ಯ ಒಕ್ಕೂಟದಿಂದ ಇನ್ನು ಮುಂದಕ್ಕೆ ಏನನ್ನೂ ನಿರೀಕ್ಷಿಸುವುದಿಲ್ಲ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ದೋಗನ್ ಹೇಳಿದ್ದಾರೆ.
ಇಯುಗೆ ನಾವು ಮಾಡಿದ್ದ ಎಲ್ಲಾ ಭರವಸೆಗಳನ್ನೂ ಉಳಿಸಿಕೊಂಡಿದ್ದೇವೆ. ಆದರೆ ಅವರು ತಮ್ಮ ಎಲ್ಲಾ ಭರವಸೆಗಳನ್ನೂ ಮರೆತಿದ್ದಾರೆ. ನಮ್ಮ ದೇಶವು ಯುರೋಪಿಯನ್ ಯೂನಿಯನ್ ಗೆ ಸೇರದಂತೆ ತಡೆಯಲು ಅಡೆತಡೆಗಳನ್ನು ಸೃಷ್ಟಿಸಲಾಗುತ್ತಿದೆ. ಟರ್ಕಿಯು ಯುರೋಪಿಯನ್ ಬಣಕ್ಕೆ ಸೇರ್ಪಡೆಗೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ಹೊಸ ಬೇಡಿಕೆ ಅಥವಾ ಷರತ್ತುಗಳನ್ನು ಸಹಿಸಲಾಗದು ಎಂದು ಎರ್ದೋಗನ್ ಹೇಳಿದ್ದಾರೆ.
2016ರಲ್ಲಿ ಟರ್ಕಿಯಲ್ಲಿ ನಡೆದ ದಂಗೆಯ ಪ್ರಯತ್ನದಲ್ಲಿ ಆರೋಪಿಯಾಗಿದ್ದ ಶಿಕ್ಷಕರೊಬ್ಬರನ್ನು ಶಿಕ್ಷೆಗೆ ಗುರಿಪಡಿಸಿದ ಟರ್ಕಿ ಸರಕಾರದ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ‘ಮಾನವ ಹಕ್ಕುಗಳಿಗೆ ಸಂಬಂಧಿಸಿದ ಯುರೋಪಿಯನ್ ನ್ಯಾಯಾಲಯ(ಇಸಿಎಚ್ಆರ್)ದ ಆದೇಶದ ಬಗ್ಗೆಯೂ ಎರ್ದೋಗನ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ದಂಗೆಯ ಷಡ್ಯಂತ್ರ ರೂಪಿಸಿದ ಆಪಾದಿತ ಸಂಚುಕೋರರೊಂದಿಗೆ ಸಂಪರ್ಕದಲ್ಲಿದ್ದ ಸಂದೇಶ ಕಳುಹಿಸುವ ಆ್ಯಪ್ ಅನ್ನು ಡೌನ್ಲೋಡ್ ಮಾಡಿದ ಆರೋಪದಲ್ಲಿ ಶಿಕ್ಷಕನಿಗೆ ಶಿಕ್ಷೆ ವಿಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಇಸಿಎಚ್ಆರ್ ಹೇಳಿದೆ.