ಯುದ್ಧಪೀಡಿತ ಸುಡಾನ್ | ಆಹಾರಕ್ಕಾಗಿ ಯೋಧರೊಂದಿಗೆ ಲೈಂಗಿಕ ಕ್ರಿಯೆಗೆ ಬಲವಂತ : ವರದಿ
►ನಾಗರಿಕ ಯುದ್ಧ ಸ್ಫೋಟಗೊಂಡ ಬೆನ್ನಿಗೇ ಹೆಚ್ಚಿದ ಲೈಂಗಿಕ ದೌರ್ಜನ್ಯ ► ಸುಡಾನ್ ನಲ್ಲಿ ಕ್ಷಾಮ
PC : NDTV
ಖಾರ್ಟೂಮ್: ಯುದ್ಧಪೀಡಿತ ಸೂಡಾನ್ ನಲ್ಲಿ ಆಹಾರ ಪಡೆಯಲು ಹಾಗೂ ತಮ್ಮ ಕುಟುಂಬಗಳ ಹೊಟ್ಟೆ ತುಂಬಿಸಲು ಯೋಧರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಹಿಳೆಯರನ್ನು ಬಲವಂತಪಡಿಸಲಾಗುತ್ತಿದೆ ಎಂದು The Guardian ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೂಡಾನ್ ನಗರವಾದ ಓಮ್ಡುರ್ಮನ್ನಿಂದ ಪರಾರಿಯಾಗಿರುವ ಇಪ್ಪತ್ತಕ್ಕೂ ಹೆಚ್ಚು ಮಂದಿ ಮಹಿಳೆಯರು, ಯೋಧರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೆ ಮಾತ್ರ ನಮಗೆ ಆಹಾರ ಮತ್ತು ಸರಕುಗಳು ದೊರೆಯುತ್ತವೆ. ಆ ಸರಕುಗಳ ಮಾರಾಟದಿಂದ ಬಂದ ಹಣದಿಂದ ನಾವು ನಮ್ಮ ಕುಟುಂಬಗಳ ಹೊಟ್ಟೆಗಳನ್ನು ತುಂಬಿಸಬೇಕಿದೆ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು The Guardian ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಮಹಿಳೆಯೋರ್ವರು, "ನಗರದಾದ್ಯಂತ ಆಹಾರ ದಾಸ್ತಾನು ತುಂಬಿ ತುಳುಕುತ್ತಿರುವ ಕಾರ್ಖಾನೆಗಳಲ್ಲಿ ಲೈಂಗಿಕ ದೌರ್ಜನ್ಯಗಳ ನಡೆಯುತ್ತಿವೆ. ನನ್ನ ಇಬ್ಬರೂ ಪೋಷಕರು ವೃದ್ಧರೂ, ಅನಾರೋಗ್ಯಪೀಡಿತರೂ ಆಗಿದ್ದಾರೆ. ಆಹಾರ ತರಲೆಂದು ನಾನೆಂದೂ ನನ್ನ ಪುತ್ರಿಯನ್ನು ಹೊರಗಡೆ ಕಳಿಸಿಲ್ಲ. ನಾನೇ ಯೋಧರ ಬಳಿ ಹೋದೆ ಹಾಗೂ ಆಹಾರ ಪಡೆಯಲು ಇದ್ದ ಮಾರ್ಗ ಅದೊಂದೇ ಆಗಿತ್ತು. ಕಾರ್ಖಾನೆ ಪ್ರದೇಶಗಳ ತುಂಬಾ ಅವರೇ ತುಂಬಿದ್ದಾರೆ" ಎಂದು ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷ ಗೋಮಾಂಸದ ಕಾರ್ಖಾನೆಯೊಂದರಲ್ಲಿ ಆ ಮಹಿಳೆಯನ್ನು ಯೋಧರು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದರು.
ಸೂಡಾನ್ನಲ್ಲಿ ದೇಶದ ಸೇನಾಪಡೆ ಹಾಗೂ ಅರೆಸೇನಾ ಪಡೆಯಾದ ಕ್ಷಿಪ್ರ ನೆರವು ಪಡೆಗಳ ನಡುವೆ ನಾಗರಿಕ ಯುದ್ಧ ಸ್ಫೋಟಗೊಂಡ ಬೆನ್ನಿಗೇ ಈ ಲೈಂಗಿಕ ದೌರ್ಜನ್ಯಗಳು ವರದಿಯಾಗತೊಡಗಿವೆ. ಕಳೆದ ವರ್ಷ ಎಪ್ರಿಲ್ 15ರಂದು ನಾಗರಿಕ ಯುದ್ಧ ಪ್ರಾರಂಭಗೊಂಡ ಬೆನ್ನಿಗೇ ಸಶಸ್ತ್ರ ಯೋಧರಿಂದ ನಡೆಯುತ್ತಿರುವ ಅತ್ಯಾಚಾರದ ಘಟನೆಗಳು ವರದಿಯಾಗುತ್ತಿವೆ.
ಸೂಡಾನ್ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಈವರೆಗೆ ಸಹಸ್ರಾರು ನಾಗರಿಕರು ಮೃತಪಟ್ಟಿದ್ದು, ಈ ಸಂಖ್ಯೆ ಸುಮಾರು 1.50 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಅಂತರ್ಯುದ್ಧದಿಂದ ಸೂಡಾನ್ ಅತ್ಯಂತ ಕೆಟ್ಟ ವಲಸೆಗೆ ಸಾಕ್ಷಿಯಾಗಿದ್ದು, ಇದುವರೆಗೆ 11 ದಶಲಕ್ಷ ಮಂದಿ ಸೂಡಾನ್ ತೊರೆದಿದ್ದಾರೆ. ಇದರಿಂದ ಸೂಡಾನ್ನಲ್ಲಿ ಕ್ಷಾಮ ತಲೆದೋರಿದೆ.