ಮಂಗಳ ಗ್ರಹದಲ್ಲಿ ನೀರಿನ ಅಂಶ ಪತ್ತೆ : ನಾಸಾ ವರದಿ
PC : X \ @latestinspace
ನ್ಯೂಯಾರ್ಕ್ : ಮಂಗಳ ಗ್ರಹದಲ್ಲಿ ದ್ರವ ರೂಪದ ನೀರಿನ ಅಂಶವೂ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಅಧ್ಯಯನ ವರದಿ ಹೇಳಿದೆ.
ನಾಸಾ ಮಂಗಳ ಗ್ರಹಕ್ಕೆ ರವಾನಿಸಿದ್ದ ಇನ್ ಸೈಟ್ಸ್ ಲ್ಯಾಂಡರ್ ಮಂಗಳ ಗ್ರಹದ ಮೇಲ್ಮೈಯ ಅಡಿಯಲ್ಲಿ ಅತ್ಯಂತ ಆಳದಲ್ಲಿ ದ್ರವ ರೂಪದ ಬೃಹತ್ ಸಂಗ್ರಹವನ್ನು ಪತ್ತೆಹಚ್ಚಿದೆ. ಈ ಹಿಂದಿನ ಅಧ್ಯಯನಗಳು ಮಂಗಳದ ಧ್ರುವಗಳಲ್ಲಿ ಹೆಪ್ಪುಗಟ್ಟಿದ ರೂಪದಲ್ಲಿ ನೀರಿನ ಸಂಗ್ರಹವಿರುವುದನ್ನು ಮತ್ತು ಅದರ ವಾತಾವರಣದಲ್ಲಿ ನೀರಿನ ಆವಿ ಅಸ್ತಿತ್ವದಲ್ಲಿರುವುದನ್ನು ದೃಢಪಡಿಸಿತ್ತು. ಆದರೆ ಇದೇ ಮೊದಲ ಬಾರಿಗೆ ದ್ರವರೂಪದ ನೀರು ಪತ್ತೆಯಾಗಿದೆ. `ನೀರು ಗ್ರಹದ ವಿಕಾಸವನ್ನು ರೂಪಿಸುವಲ್ಲಿ ಪ್ರಮುಖ ಕಣಗಳಾಗಿವೆ. ಈ ಸಂಶೋಧನೆಯು ಮಂಗಳನ ಎಲ್ಲಾ ನೀರು ಎಲ್ಲಿಗೆ ಹೋಯಿತು ? ಎಂಬ ಪ್ರಶ್ನೆಗೆ ಉತ್ತರಿಸಲಿದೆ' ಎಂದು ಕ್ಯಾಲಿಫೋರ್ನಿಯಾ ವಿವಿಯ ಪ್ರೊ. ಮೈಕೆಲ್ ಮಾಂಗ್ ಹೇಳಿದ್ದಾರೆ.
ಪ್ರಾಚೀನ ಕಾಲದಲ್ಲಿ ಮಂಗಳನಲ್ಲಿ ನದಿಗಳು ಮತ್ತು ಸರೋವರಗಳು ಅಸ್ತಿತ್ವದಲ್ಲಿತ್ತು ಎಂಬುದನ್ನು ಸಾಬೀತುಪಡಿಸುವ ನೀರಿನ ಕಾಲುವೆಗಳು ಮತ್ತು ತರಂಗಗಳ ಪುರಾವೆಗಳನ್ನು ಅಧ್ಯಯನಗಳು ಕಂಡುಕೊಂಡಿವೆ. ಆದರೆ ಗ್ರಹವು ಮೂರು ಶತಕೋಟಿ ವರ್ಷಗಳಿಂದ ಮರುಭೂಮಿಯಾಗಿದೆ. ಯಾಕೆಂದರೆ ತನ್ನ ವಾಯುಮಂಡಲವನ್ನು ಕಳೆದುಕೊಂಡ ಬಳಿಕ ಎಲ್ಲಾ ನೀರೂ ಸೂರ್ಯನಿಂದಾಗಿ ಕಳೆದು ಹೋಗಿದೆ ಎಂದು ವರದಿ ಹೇಳಿದೆ.
ಭೂಮಿಯ ಬಹುತೇಕ ನೀರು ನೆಲದಡಿಯಲ್ಲಿ ಅಸ್ತಿತ್ವದಲ್ಲಿದೆ. ಮಂಗಳನಲ್ಲೂ ಇದೇ ಸಾಧ್ಯತೆ ಇರಬಹುದು. ನೀರಿಲ್ಲದೆ ಜೀವನ ಸಾಧ್ಯವಿಲ್ಲದ ಕಾರಣ ಮಂಗಳನಲ್ಲಿ ಭೂಗತ ಆಳವಾದ ವಾಸಯೋಗ್ಯ ಪರಿಸರವನ್ನು ಕಂಡುಹಿಡಿಯುವ ಸಾಧ್ಯತೆಯನ್ನು ಸಂಶೋಧನೆಯು ಸೂಚಿಸುತ್ತದೆ. ಮಂಗಳ ಗ್ರಹದ ನೆಲದ ಆಳದಲ್ಲಿರುವ ಬಂಡೆಗಳ ನಡುವೆ ನೀರು ಇರಬಹುದು ಎಂದು ಭಾವಿಸಲಾಗಿದೆ. ನಾಸಾದ ಲ್ಯಾಂಡರ್ ಸುಮಾರು 1,319 ಭೂಕಂಪನಗಳನ್ನು ದಾಖಲಿಸಿದೆ ಮತ್ತು ಭೂಕಂಪನದ ಅಲೆಗಳ ವೇಗವನ್ನು ಅಳೆಯುವ ಮೂಲಕ ವಿಜ್ಞಾನಿಗಳು ನೆಲದಾಳದಲ್ಲಿ ದ್ರವರೂಪದಲ್ಲಿ ನೀರು ಅಸ್ತಿತ್ವದಲ್ಲಿರುವ ಸಾಧ್ಯತೆಯಿದೆ ಎಂದು ವರದಿ ಮಾಡಿದ್ದಾರೆ.