ಇಸ್ರೇಲ್ ಗಾಝಾದಲ್ಲಿ ನರಮೇಧ ನಡೆಸುತ್ತಿದೆ ಎನ್ನುವುದನ್ನು ನಾವು ನಂಬುವುದಿಲ್ಲ: ಅಮೆರಿಕ
PC : PTI
ವಾಷಿಂಗ್ಟನ್: ಗಾಝಾದಲ್ಲಿ ನರಮೇಧ ನಡೆಯುತ್ತಿದೆ ಎನ್ನುವುದನ್ನು ತಾನು ನಂಬುವುದಿಲ್ಲ, ಆದರೆ ಫೆಲೆಸ್ತೀನ್ ನಾಗರಿಕರನ್ನು ರಕ್ಷಿಸಲು ಇಸ್ರೇಲ್ ಹೆಚ್ಚಿನದನ್ನು ಮಾಡಬೇಕು ಎಂದು ಅಮೆರಿಕ ಹೇಳಿದೆ.
‘ಅಮಾಯಕ ನಾಗರಿಕರ ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಚಿತ ಪಡಿಸಿಕೊಳ್ಳಲು ಇಸ್ರೇಲ್ ಹೆಚ್ಚಿನದನ್ನು ಮಾಡಬೇಕು ಮತ್ತು ಮಾಡಲೇಬೇಕು ಎಂದು ನಾವು ಭಾವಿಸಿದ್ದೇವೆ ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ಅವರು, ‘ಗಾಝಾದಲ್ಲಿ ನಡೆಯುತ್ತಿರುವುದು ನರಮೇಧ ಎಂದು ನಾವು ನಂಬುವುದಿಲ್ಲ’ ಎಂದರು.
ಅಮೆರಿಕವು ನರಮೇಧಕ್ಕಾಗಿ ಉದ್ದೇಶವನ್ನು ಕೇಂದ್ರೀಕರಿಸುವ ಅಂತರಾಷ್ಟ್ರೀಯವಾಗಿ ಒಪ್ಪಿಕೊಳ್ಳಲಾಗಿರುವ ಪದವನ್ನು ಬಳಸುತ್ತದೆ ಎಂದು ಅವರು ಹೇಳಿದರು.
ಫೆಲೆಸ್ತೀನಿ ಹೋರಾಟಗಾರರ ಗುಂಪು ಹಮಾಸ್ ಸೋಲುವುದನ್ನು ನೋಡಲು ಬೈಡೆನ್ ಬಯಸಿದ್ದಾರೆ ಎಂದು ಸುಲಿವಾನ್ ಹೇಳಿದರಾದರೂ, ಸಂಘರ್ಷದ ಮಧ್ಯ ಸಿಕ್ಕಿಹಾಕಿಕೊಂಡಿರುವ ಫೆಲೆಸ್ತೀನಿಯರು ನರಕದಲ್ಲಿ ಬದುಕುತ್ತಿದ್ದಾರೆ ಮತ್ತು ಅವರು ಅನುಭವಿಸಿದ ಸಾವುನೋವುಗಳನ್ನು,ಆಘಾತವನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.