ಗಾಝಾ ವರದಿಗಾರಿಕೆ ಕುರಿತು ‘ದಿ ನ್ಯೂಯಾರ್ಕ್ ಟೈಮ್ಸ್’ ಕಚೇರಿಯಲ್ಲಿ ಸಾಮಾಜಿಕ ಹೋರಾಟಗಾರರ ಪ್ರತಿಭಟನೆ
“ವರದಿಗಾರಿಕೆಯಲ್ಲಿ ಇಸ್ರೇಲ್ ಪರ ಪಕ್ಷಪಾತ ತೋರಿಸುತ್ತಿದೆ”
Photo: X/@johnknefel
ನ್ಯೂಯಾರ್ಕ್: ಗುರುವಾರ ಇಲ್ಲಿಯ ‘ದಿ ನ್ಯೂಯಾರ್ಕ್ ಟೈಃಮ್ಸ್ ’ನ ಕಚೇರಿಗೆ ನುಗ್ಗಿದ ಸಾಮಾಜಿಕ ಹೋರಾಟಗಾರರು ಪತ್ರಿಕೆಯು ಇಸ್ರೇಲ್-ಹಮಾಸ್ ಯುದ್ಧದ ಕುರಿತು ತನ್ನ ವರದಿಗಾರಿಕೆಯಲ್ಲಿ ಇಸ್ರೇಲ್ ಪರ ಪಕ್ಷಪಾತವನ್ನು ತೋರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಯನ್ನು ನಡೆಸಿದರು. ‘ದಿ ನ್ಯೂಯಾರ್ಕ್ ಕ್ರೈಮ್ಸ್ ’ಶೀರ್ಷಿಕೆಯ ಅಣಕು ಪತ್ರಿಕೆಯನ್ನು ನೆಲದ ತುಂಬ ಹರಡಿದ ಅವರು ಪತ್ರಕರ್ತರು ಸೇರಿದಂತೆ ಗಾಝಾದಲ್ಲಿ ಕೊಲ್ಲಲ್ಪಟ್ಟ ಸಾವಿರಾರು ಫೆಲೆಸ್ತೀನಿಗಳ ಹೆಸರುಗಳನ್ನು ಓದಿದರು.
ಫೆಲೆಸ್ತೀನಿ ಧ್ವಜಗಳನ್ನು ಬೀಸುತ್ತ ‘ದಿ ನ್ಯೂಯಾರ್ಕ್ ಟೈಮ್ಸ್ ’ಕಚೇರಿಗೆ ಜಾಥಾದಲ್ಲಿ ಬಂದಿದ್ದ ಸಾವಿರಾರು ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ಗಾಝಾದ ಮೇಲೆ ಇಸ್ರೇಲ್ನ ಬಾಂಬ್ದಾಳಿಗಳನ್ನು ವಿರೋಧಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ‘ರೈಟರ್ಸ್ ಬ್ಲಾಕ್ ’ ಎಂದು ತನ್ನನ್ನು ಕರೆದುಕೊಂಡಿರುವ ಮಾಧ್ಯಮ ಕಾರ್ಯಕರ್ತರ ಸಣ್ಣ ಗುಂಪೊಂದು ಭಿತ್ತಿಪತ್ರಗಳೊಂದಿಗೆ ಕಚೇರಿಯ ಮೊಗಸಾಲೆಯನ್ನು ಪ್ರವೇಶಿಸಿದರು. ಗಾಝಾದಲ್ಲಿ ಕದನ ವಿರಾಮಕ್ಕೆ ಬಹಿರಂಗ ಕರೆ ನೀಡುವಂತೆ ಅವರು ಪತ್ರಿಕೆಯ ಆಡಳಿತವನ್ನು ಆಗ್ರಹಿಸಿದರು. ಅ.7ರಂದು ಯುದ್ಧ ಆರಂಭಗೊಂಡಾಗಿನಿಂದ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿರುವ 36 ಪತ್ರಕರ್ತರು ಸೇರಿದಂತೆ ಗಾಝಾದಲ್ಲಿ ಕೊಲ್ಲಲ್ಪಟ್ಟ ಸಾವಿರಾರು ಫೆಲೆಸ್ತೀನಿ ನಾಗರಿಕರ ಹೆಸರುಗಳನ್ನು ಪ್ರತಿಭಟನಾಕಾರರು ಓದಿದರು. ಅವರು ಪ್ರದರ್ಶಿಸಿದ ಅಣಕು ಪತ್ರಿಕೆಯಲ್ಲಿ ಕರ್ತವ್ಯದಲ್ಲಿದ್ದಾಗ ಕೊಲ್ಲಲ್ಪಟ್ಟ ಪತ್ರಕರ್ತರ ಹೆಸರುಗಳನ್ನು ಒಳಗೊಂಡ ಪುಟಕ್ಕೆ ‘ನಾವು ನಮ್ಮ ಸಹೋದ್ಯೋಗಿಗಳನ್ನು ಕೊಂದಿದ್ದೇವೆ ’ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು.
ಸ್ಥಳದಲ್ಲಿ ಉಪಸ್ಥಿತರಿದ್ದ ಪೋಲಿಸರು ಒಂದು ಗಂಟೆಯೊಳಗೆ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಿದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟವರ ಕುರಿತು ಯಾವುದೇ ವರದಿಗಳಿಲ್ಲ, ಪ್ರತಿಭಟನೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಕಟ್ಟಡದ ಹೊರಗೆ ನಿಲ್ಲಿಸಲಾಗಿದ್ದ ಪೋಲಿಸ್ ವಾಹನವೊಂದರ ಹಿಂದಿನ ಕಿಟಕಿಯ ಗಾಜನ್ನು ಹುಡಿಗೈದ ಪ್ರತಿಭಟನಾಕಾರರು ಅದರ ಪಕ್ಕದಲ್ಲಿ ‘ಗಾಝಾವನ್ನು ಮುಕ್ತಗೊಳಿಸಿ’ ಎಂದು ಬರೆದಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಈ ನಡುವೆ, ಅ.7ರಂದು ಇಸ್ರೇಲ್ ವಿರುದ್ಧ ಹಮಾಸ್ ದಾಳಿಯ ಬಗ್ಗೆ ತನ್ನ ಪತ್ರಕರ್ತರಿಗೆ ಪೂರ್ವ ಮಾಹಿತಿಯಿರಲಿಲ್ಲ ಮತ್ತು ಅವರು ಹಮಾಸ್ ಹೋರಾಟಗಾರರೊಂದಿಗಿದ್ದರು ಎನ್ನುವುದು ಸಂಪೂರ್ಣ ಸುಳ್ಳು ಹೇಳಿಕೆಯಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ಹಮಾಸ್ ಹೋರಾಟಗಾರರು ಇಸ್ರೇಲ್ನಲ್ಲಿ ಗಡಿ ಪ್ರದೇಶದ ಮೇಲೆ ದಾಳಿ ನಡೆಸುತ್ತಿದ್ದಾಗ ಗಾಝಾದಲ್ಲಿಯ ಫೋಟೊಜರ್ನಲಿಸ್ಟ್ಗಳು ಅವರೊಂದಿಗಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಇಸ್ರೇಲಿನ ‘ಹಾನೆಸ್ಟ್ ರಿಪೋರ್ಟಿಂಗ್’ ವರದಿ ಮಾಡಿತ್ತು.
“ಇಸ್ರೇಲ್ ಮತ್ತು ಗಾಝಾದಲ್ಲಿಯ ನಮ್ಮ ಪತ್ರಕರ್ತರನ್ನು ಅಪಾಯಕ್ಕೆ ಸಿಲುಕಿಸುವ ಇಂತಹ ಆರೋಪಗಳನ್ನು ಮಾಡುವುದು ಹೊಣೆಗೇಡಿತನವಾಗಿದೆ. ಪತ್ರಿಕೆಯು ಅ.7ರ ದಾಳಿ ಮತ್ತು ನಂತರದ ಯುದ್ಧದ ಬಗ್ಗೆ ನ್ಯಾಯಸಮ್ಮತವಾಗಿ ಮತ್ತು ನಿಷ್ಪಕ್ಷವಾಗಿ ವರದಿಮಾಡಿದೆ” ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.