ಚೀನಾದಿಂದ ತೈವಾನ್ ವಿಭಜನೆ ತಡೆಯುತ್ತೇವೆ: ಕ್ಸಿಜಿಂಪಿಂಗ್ ಪ್ರತಿಜ್ಞೆ
ಕ್ಸಿಜಿಂಪಿಂಗ್ | Photo: PTI
ಬೀಜಿಂಗ್: ಚೀನಾದಿಂದ ತೈವಾನ್ ಅನ್ನು ಯಾವುದೇ ರೀತಿಯಲ್ಲಿ ಪ್ರತ್ಯೇಕಿಸುವ ಯತ್ನವನ್ನು ದೃಢವಾಗಿ ತಡೆಯುವುದಾಗಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಪ್ರತಿಜ್ಞೆ ಮಾಡಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.
ತೈವಾನ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರನ್ನು ಬೆದರಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ತೈವಾನ್ ಸರಕಾರ ಆರೋಪಿಸಿರುವ ಸಂದರ್ಭದಲ್ಲೇ ಕ್ಸಿಜಿಂಪಿಂಗ್ ಈ ಹೇಳಿಕೆ ನೀಡಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಿರುವ ತೈವಾನ್ ತನ್ನ ಪ್ರದೇಶವೆಂದು ಹೇಳುತ್ತಿರುವ ಚೀನಾ ತನ್ನ ಸಾರ್ವಭೌಮತ್ವದ ಹಕ್ಕುಗಳನ್ನು ಪ್ರತಿಪಾದಿಸಲು ತೈವಾನ್ ಮೇಲೆ ರಾಜಕೀಯ ಮತ್ತು ಮಿಲಿಟರಿ ಒತ್ತಡವನ್ನು ಹೆಚ್ಚಿಸುತ್ತಿದೆ. ತೈವಾನ್ನಲ್ಲಿ ಜನವರಿ 13ರಂದು ನಡೆಯಲಿರುವ ಅಧ್ಯಕ್ಷೀಯ ಮತ್ತು ಸಂಸದೀಯ ಚುನಾವಣೆಯ ಪ್ರಚಾರ ಅಭಿಯಾನದಲ್ಲಿ ತೈವಾನ್-ಚೀನಾ ಸಂಬಂಧದ ವಿಷಯ ಪ್ರಮುಖವಾಗಿದೆ. 1949ರಲ್ಲಿ ಚೀನಾದಲ್ಲಿ ನಡೆದ ಅಂತರ್ಯುದ್ಧದಲ್ಲಿ ಪರಾಜಯಗೊಂಡ `ರಿಪಬ್ಲಿಕ್ ಆಫ್ ಚೀನಾ' ಸರಕಾರ ತೈವಾನ್ ದ್ವೀಪಕ್ಕೆ ಪಲಾಯನ ಮಾಡಿ ಅಲ್ಲಿ ತನ್ನ ಆಡಳಿತ ಸ್ಥಾಪಿಸಿತ್ತು. ಚೀನಾದ ಮಾಜಿ ಮುಖಂಡ ಮಾವೊ ಝೆದಾಂಗ್ ಅವರ 130ನೇ ಜನ್ಮದಿನಾಚರಣೆಯ ಸಂದರ್ಭ ಮಾತನಾಡಿದ ಕ್ಸಿಜಿಂಪಿಂಗ್ `ಮಾತೃಭೂಮಿಯ ಸಂಪೂರ್ಣ ಪುನರೇಕೀಕರಣ ತಡೆಯಲಾಗದ ಪ್ರಕ್ರಿಯೆಯಾಗಿದೆ. ಮಾತೃಭೂಮಿಯನ್ನು ಮತ್ತೆ ಒಗ್ಗೂಡಿಸಬೇಕು ಮತ್ತು ಇದು ಅನಿವಾರ್ಯವಾಗಿದೆ. ಚೀನಾ ಎರಡೂ ಕಡೆಯ ನಡುವೆ ಏಕೀಕರಣವನ್ನು ಗಾಢವಾಗಿಸಬೇಕು. ತೈವಾನ್ ಜಲಸಂಧಿಯಾದ್ಯಂತ ಸಂಬಂಧಗಳ ಶಾಂತಿಯುತ ಪ್ರಗತಿಯನ್ನು ಉತ್ತೇಜಿಸಬೇಕು ಮತ್ತು ಯಾವುದೇ ರೀತಿಯಲ್ಲಿ ಚೀನಾದಿಂದ ತೈವಾನನ್ನು ವಿಭಜಿಸುವುದನ್ನು ದೃಢವಾಗಿ ತಡೆಯಬೇಕು ' ಎಂದು ಪ್ರತಿಪಾದಿಸಿರುವುದಾಗಿ ವರದಿಯಾಗಿದೆ.
ತೈವಾನ್ ವಿರುದ್ಧ ಬಲಪ್ರಯೋಗದ ಬಗ್ಗೆ ಅಥವಾ ಮುಂಬರುವ ಚುನಾವಣೆ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ. ಆದರೆ ಬಲಪ್ರಯೋಗದ ಸಾಧ್ಯತೆಯನ್ನು ಚೀನಾ ತಳ್ಳಿಹಾಕಿಲ್ಲ. `ತೈವಾನ್ ಚುನಾವಣೆ ಚೀನಾದ ಆಂತರಿಕ ವ್ಯವಹಾರವಾಗಿದ್ದು ದ್ವೀಪದ ಜನತೆ ಯುದ್ಧ ಮತ್ತು ಶಾಂತಿಯ ನಡುವೆ ಆಯ್ಕೆ ಮಾಡಿಕೊಳ್ಳಬೇಕು. ತೈವಾನ್ ಸ್ವಾತಂತ್ರ್ಯದ ಕುರಿತ ಯಾವುದೇ ಪ್ರಯತ್ನವು ಯುದ್ಧ ಎಂದರ್ಥ' ಎಂದು ಚೀನಾ ಹೇಳಿದೆ. ಕಳೆದ ಒಂದೂವರೆ ವರ್ಷದಲ್ಲಿ ಚೀನಾವು ತೈವಾನ್ ಸುತ್ತಮುತ್ತ ಎರಡು ಸುತ್ತಿನ ಸಮರಾಭ್ಯಾಸ ನಡೆಸಿದೆ ಮತ್ತು ತೈವಾನ್ ಜಲಸಂಧಿಗೆ ನಿರಂತರ ಸಮರನೌಕೆ ಮತ್ತು ಯುದ್ಧವಿಮಾನವನ್ನು ರವಾನಿಸುತ್ತಿದೆ.
ತೈವಾನ್ ಅಧ್ಯಕ್ಷ ಹುದ್ದೆಯ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಆಡಳಿತಾರೂಢ ಡೆಮೊಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಡಿಪಿಪಿ)ಯ ಲಾಯ್ ಚಿಂಗ್ಟೆ ಅವರನ್ನು ಅಪಾಯಕಾರಿ ಪ್ರತ್ಯೇಕತಾವಾದಿ ಎಂದು ಪದೇ ಪದೇ ಖಂಡಿಸುತ್ತಿರುವ ಚೀನಾ, ಮಾತುಕತೆಗಾಗಿ ಅವರು ನೀಡಿದ ಕರೆಗಳನ್ನು ತಿರಸ್ಕರಿಸಿದೆ. ತೈವಾನ್ನ ಭವಿಷ್ಯವನ್ನು ಜನರು ಮಾತ್ರ ನಿರ್ಧರಿಸುತ್ತಾರೆ ಎಂದು ಡಿಪಿಪಿ ಮತ್ತು ಪ್ರಮುಖ ವಿಪಕ್ಷ `ಕೆಎಂಟಿ'ಗಳೆರಡೂ ಹೇಳಿಕೆ ನೀಡಿರುವುದು ಚೀನಾದ ಆಕ್ರೋಶವನ್ನು ಹೆಚ್ಚಿಸಿದೆ.