ಪಶ್ಚಿಮದಂಡೆ | ಇಸ್ರೇಲ್ ದಾಳಿಯಲ್ಲಿ ಹಮಾಸ್ ನ 3 ಸದಸ್ಯರು ಮೃತ್ಯು
ಸಾಂದರ್ಭಿಕ ಚಿತ್ರ (PTI)
ಜೆರುಸಲೇಂ : ಆಕ್ರಮಿತ ಪಶ್ಚಿಮದಂಡೆಯ ರಾಜಧಾನಿ ತುಬಾಸ್ ಬಳಿ ಮಂಗಳವಾರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ನ ಮೂರು ಸದಸ್ಯರು ಹತರಾಗಿರುವುದಾಗಿ ಇಸ್ರೇಲ್ ಸೇನೆ ಬುಧವಾರ ಹೇಳಿದೆ.
ತುಬಾಸ್ ನ ಬಳಿಯ ಅಖಾಬ ಪ್ರದೇಶದಲ್ಲಿ ವಾಹನಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಹಮಾಸ್ ನ ಮೂವರು ಸಶಸ್ತ್ರ ಹೋರಾಟಗಾರರು ಮೃತಪಟ್ಟಿದ್ದಾರೆ. ಬಳಿಕ ಈ ದಾಳಿ ನಡೆದ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ಯೋಧರು ಶೋಧ ಕಾರ್ಯಾಚರಣೆ ನಡೆಸಿದಾಗ 4 ಆಯುಧಗಳು ಪತ್ತೆಯಾಗಿವೆ ಎಂದು ಇಸ್ರೇಲ್ ಹೇಳಿದೆ.
ವೈಮಾನಿಕ ದಾಳಿ ನಡೆದಿರುವುದನ್ನು ದೃಢಪಡಿಸಿರುವ ಫೆಲೆಸ್ತೀನ್ ಆರೋಗ್ಯ ಇಲಾಖೆ, ಇಬ್ಬರು ಮೃತಪಟ್ಟಿದ್ದು ಒಬ್ಬ ಗಾಯಗೊಂಡಿದ್ದಾನೆ. ಮೃತದೇಹಗಳನ್ನು ಮತ್ತು ಗಾಯಾಳುವನ್ನು ತುಬಾಸ್ ಆಸ್ಪತ್ರೆಗೆ ಸ್ಥಳಾಂತರಿಸಿದ ಬಳಿಕ ಆಸ್ಪತ್ರೆಯ ಒಳಗೆ ನುಗ್ಗಿದ ಇಸ್ರೇಲ್ ಯೋಧರು ಸಿಬ್ಬಂದಿಗಳನ್ನು ಥಳಿಸಿದ್ದಾರೆ ಎಂದು ವರದಿ ಮಾಡಿದೆ. ಆಸ್ಪತ್ರೆಯ ಹೊರಗೆ ಇಸ್ರೇಲ್ ನ ಶಸ್ತ್ರಸಜ್ಜಿತ ವಾಹನ ನಿಂತಿರುವುದು ಮತ್ತು ಅದರಿಂದ ಇಳಿದ ಯೋಧರು ಆಸ್ಪತ್ರೆಯನ್ನು ಪ್ರವೇಶಿಸಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ