ಟ್ರಂಪ್ ಅವರನ್ನು 'ರಾಜ' ಎಂದು ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಿದ ಶ್ವೇತ ಭವನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

Photo credit: X/@WhiteHouse
ವಾಶಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತನ್ನನ್ನು ರಾಜನಿಗೆ ಹೋಲಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಶ್ವೇತಭವನದ ಅಧಿಕೃತ ಎಕ್ಸ್ ಖಾತೆ ಟ್ರಂಪ್ನ್ನು ರಾಜನಿಗೆ ಹೋಲಿಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ತಾನು ಅಮೆರಿಕದ ರಾಜ ಎಂದು ಘೋಷಿಸಿಕೊಂಡಿದ್ದಾರೆಯೇ? ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಶ್ನಿಸಿದ್ದು, ಅಧ್ಯಕ್ಷೀಯ ಅಧಿಕಾರದ ಕುರಿತು ಅವರ ದೃಷ್ಟಿಕೋನದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ʼಸಂಚಾರ ದಟ್ಟಣೆಯ ಬೆಲೆ ನಿಗದಿ ಅಂತ್ಯಗೊಂಡಿದೆ. ಮ್ಯಾನ್ ಹ್ಯಾಟನ್ ಮತ್ತು ಇಡೀ ನ್ಯೂಯಾರ್ಕ್ ರಕ್ಷಿಸಲ್ಪಟ್ಟಿವೆ. ರಾಜನಿಗೆ ಜಯವಾಗಲಿʼಎಂದು ಶ್ವೇತ ಭವನದ ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ. ʼರಾಜನಿಗೆ ದೀರ್ಘಾಯುಷ್ಯʼ ಎಂಬ ಶೀರ್ಷಿಕೆಯೊಂದಿಗೆ ಟೈಮ್ ಮ್ಯಾಗಝೀನ್ ಕವರ್ ಅನ್ನು ಹೋಲುವ ನಕಲಿ ಚಿತ್ರದಲ್ಲಿ ಟ್ರಂಪ್ ಕಿರೀಟವನ್ನು ಧರಿಸಿರುವುದನ್ನು ಕಾಣಬಹುದು. ಇದರ ಬೆನ್ನಲ್ಲೇ ಶ್ವೇತಭವನದ ಡೆಪ್ಯುಟಿ ಚೀಫ್ ಆಫ್ ಸ್ಟಾಫ್ ಟೇಲರ್ ಬುಡೋವಿಚ್ ಟ್ರಂಪ್ ಅವರು AI ರಚಿತ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಬುಧವಾರ ಟ್ರಂಪ್ ಅವರ ಸರಕಾರದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರಿಗೆ ಪತ್ರ ಬರೆದು ನ್ಯೂಯಾರ್ಕ್ ಜೊತೆಗಿನ ಸಾರಿಗೆ ಇಲಾಖೆಯ ಒಪ್ಪಂದವನ್ನು ಕೊನೆಗೊಳಿಸುವ ಬಗ್ಗೆ ಹೇಳಿದ್ದರು. ಹೆಚ್ಚುವರಿ ಟೋಲ್ಗಳನ್ನು ನಿರ್ಬಂಧಿಸುವ ಫೆಡರಲ್ ಸರ್ಕಾರದ ಕ್ರಮವನ್ನು ಟ್ರಂಪ್ ಶ್ಲಾಘಿಸಿದರು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತನ್ನನ್ನು ರಾಜಮನೆತನಕ್ಕೆ ಹೋಲಿಸಿಕೊಂಡರು.
ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಈ ಕುರಿತು ಪ್ರತಿಕ್ರಿಯಿಸಿ, ನಮ್ಮದು ಕಾನೂನುಗಳನ್ನು ಹೊಂದಿರುವ ರಾಷ್ಟ್ರ, ರಾಜನ ಆಳ್ವಿಕೆಗೆ ಒಳಪಡುವುದಿಲ್ಲ. ಈ ಬಗ್ಗೆ ನಾವು ನ್ಯಾಯಾಲಯದಲ್ಲಿ ಪ್ರಸ್ತಾಪಿಸುತ್ತೇವೆ. ಸಾರ್ವಜನಿಕ ಸಾರಿಗೆಯು ನ್ಯೂಯಾರ್ಕ್ ನಗರದ ಜೀವಾಳವಾಗಿದೆ ಮತ್ತು ನಮ್ಮ ಆರ್ಥಿಕ ಭವಿಷ್ಯಕ್ಕೆ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ 250 ವರ್ಷಗಳಿಗೂ ಹೆಚ್ಚು ಕಾಲ ರಾಜನ ಆಳ್ವಿಕೆಗೆ ಒಳಪಟ್ಟಿಲ್ಲ. ನಾವು ಈಗ ಖಂಡಿತವಾಗಿಯೂ ಅದಕ್ಕೆ ಅನುಮತಿಸುವುದಿಲ್ಲ ಎಂದು ಸರ್ವಾಧಿಕಾರವನ್ನು ವಿರೋಧಿಸುವ ದೃಢಸಂಕಲ್ಪವನ್ನು ಕ್ಯಾಥಿ ಹೊಚುಲ್ ಪುನರುಚ್ಚರಿಸಿದ್ದಾರೆ.
ಶ್ವೇತಭವನದ ಅಧಿಕೃತ ಎಕ್ಸ್ ಖಾತೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಕೆಲವು ಎಕ್ಸ್ ಬಳಕೆದಾರರು ಟ್ರಂಪ್ ಅವರನ್ನು ಟೀಕಿಸಿದ್ದು, ಈ ಬೆಳವಣಿಗೆಯು ಅವಮಾನಕಾರಿಯಾಗಿದೆ ಎಂದು ಹೇಳಿದ್ದಾರೆ.
ʼನಾನು ಟ್ರಂಪ್ಗೆ ಮತ ಹಾಕಿದ ರಿಪಬ್ಲಿಕನ್, ಆದರೆ ಯಾವುದೇ ವ್ಯಕ್ತಿ ರಾಜನಲ್ಲ. ಅದು ನಮ್ಮ ರಾಷ್ಟ್ರದ ಆದರ್ಶವಲ್ಲ, ನಮ್ಮ ದೇಶಕ್ಕೆ ಯಾವುದೇ ರಾಜರಿಲ್ಲʼ ಎಂದು ಡಾನ್ ಹೆನ್ಫಾಕ್ಸ್ ಎಂಬವರು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಬರೆದಿದ್ದಾರೆ.
ನೀವು ಟ್ರಂಪ್ ಬೆಂಬಲಿಗರೋ ಅಲ್ಲವೋ ಎಂಬುದು ನನಗೆ ಮುಖ್ಯವಲ್ಲ. ಶ್ವೇತಭವನದ ಅಧಿಕೃತ ಪುಟದಿಂದ ಹೊರಬರುತ್ತಿರುವ ಈ ಭಾಷೆ ಕಳವಳಕಾರಿಯಾಗಿದೆ ಎಂದು EK ಎಂಬ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.
"CONGESTION PRICING IS DEAD. Manhattan, and all of New York, is SAVED. LONG LIVE THE KING!"
— The White House (@WhiteHouse) February 19, 2025
–President Donald J. Trump pic.twitter.com/IMr4tq0sMB
We’re doomed. Was a great run, America. ♂️
— Wade Wilson (@Wadestoupee) February 19, 2025
i'm a republican who voted trump, but no one man is a king. that's the ideals of our nation, no kings.
— Dan Henfox (@DanHenTRUTHFOX) February 19, 2025