ಆಫ್ರಿಕಾದಲ್ಲಿ ಹರಡುತ್ತಿರುವ mpox | ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ
PC: AP
ಲಂಡನ್ : ವಿಶ್ವ ಆರೋಗ್ಯ ಸಂಸ್ಥೆ(WHO)ಯು ಬುಧವಾರ ಕಾಂಗೋ ಮತ್ತು ಆಫ್ರಿಕಾದ ಇತರೆಡೆಗಳಲ್ಲಿ ಹರಡುತ್ತಿರುವ mpox ವೈರಸನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಆಫ್ರಿಕಾದ ಹನ್ನೆರಡು ದೇಶಗಳಲ್ಲಿ ಮಕ್ಕಳು ಮತ್ತು ವಯಸ್ಕರಲ್ಲಿ mpox ಪ್ರಕರಣಗಳು ದೃಢಪಟ್ಟಿವೆ ಎಂದು ವರದಿಯಾಗಿದೆ.
ವೈರಸ್ನ ಹೊಸ ರೂಪಗಳು ಹರಡುತ್ತಿದ್ದು, ಆಫ್ರಿಕಾ ಖಂಡದಲ್ಲಿ ಸೀಮಿತ ಪ್ರಮಾಣದ ಲಸಿಕೆ ಲಭ್ಯವಿದೆ ಎನ್ನಲಾಗಿದೆ. ಈ ವಾರದ ಆರಂಭದಲ್ಲಿ, mpox ನಿಂದ ಮೃತಪಟ್ಟ ಪ್ರಕರಣಗಳು 500 ಕ್ಕೆ ತಲುಪುತ್ತಿದ್ದಂತೆ ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು. ಜೊತೆಗೆ, ವೈರಸ್ ಹರಡುವುದನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಸಮುದಾಯದ ಸಹಾಯ ಯಾಚಿಸಿತು.
ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ(WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ "ಇದು ನಮಗೆಲ್ಲರಿಗೂ ಕಾಳಜಿ ವಹಿಸಬೇಕಾದ ವಿಷಯವಾಗಿದೆ. ಆಫ್ರಿಕಾ ಮತ್ತು ಅದರಾಚೆಗೆ ಮತ್ತಷ್ಟು ಹರಡುವ ಸಾಧ್ಯತೆಯು ತುಂಬಾ ಕಳವಳಕಾರಿಯಾಗಿದೆ" ಎಂದು ಹೇಳಿದ್ದಾರೆ.
ಮೂರು ವರ್ಷಗಳ ಅಂತರದಲ್ಲಿ ಇದು ಎರಡನೇ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ(WHO)ಯು mpox ಸಾಂಕ್ರಾಮಿಕ ರೋಗವನ್ನು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ. ಇದು ಈ ಹಿಂದೆ ಜುಲೈ 2022 ರಲ್ಲಿ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿತ್ತು.