ʼಯುನೈಟೆಡ್ ಹೆಲ್ತ್ ಕೇರ್ʼ ಸಿಇಒ ಬ್ರಿಯಾನ್ ಕೊಲೆ ಪ್ರಕರಣ: ಬಂಧಿತ ಲುಯಿಜಿ ಮ್ಯಾಂಜಿಯೋನ್ ಯಾರು?
ಲುಯಿಜಿ ಮ್ಯಾಂಜಿಯೋನ್ (Photo:X/@SyeClops)
ನ್ಯೂಯಾರ್ಕ್ : ಹೆಲ್ತ್ ಇನ್ಸೂರೆನ್ಸ್ ಕಂಪೆನಿ ʼಯುನೈಟೆಡ್ ಹೆಲ್ತ್ ಕೇರ್ʼ ಸಿಇಒ ಬ್ರಿಯಾನ್ ಥಾಂಪ್ಸನ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಐವಿ ಲೀಗ್ ವಿದ್ಯಾರ್ಥಿ ಲುಯಿಜಿ ಮ್ಯಾಂಜಿಯೋನ್ ಎಂಬಾತನನ್ನು ಬಂಧಿಸಲಾಗಿದೆ.
ಸೋಮವಾರ ಪೆನ್ಸಿಲ್ವೇನಿಯಾದ ಅಲ್ಟೂನಾದಲ್ಲಿ ಲುಯಿಜಿ ಮ್ಯಾಂಜಿಯೋನ್ ನನ್ನು ಬಂಧಿಸಲಾಗಿತ್ತು. ಬಂಧನದ ವೇಳೆ ಈತನ ಬಳಿ ಪರವಾನಿಗೆ ಇಲ್ಲದ ಬಂದೂಕು ಮತ್ತು ನಕಲಿ ಗುರುತಿನ ಚೀಟಿ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 4ರಂದು ನ್ಯೂಯಾರ್ಕ್ ನ ಹಿಲ್ಟನ್ ಮಿಡ್ಟೌನ್ ಹೊಟೇಲ್ ಹೊರಗಿದ್ದಾಗ ಬ್ರಿಯಾನ್ ಥಾಂಪ್ಸನ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಅವರು ಕಂಪೆನಿಯ ವಾರ್ಷಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಭಾಗವಹಿಸುವ ದೃಷ್ಟಿಯಿಂದ ನ್ಯೂಯಾರ್ಕ್ ಗೆ ತೆರಳಿದ್ದರು.
ಬಂಧಿತ ಆರೋಪಿ ಲುಯಿಜಿ ಮ್ಯಾಂಜಿಯೋನ್ ಸಾಫ್ಟ್ ವೇರ್ ಪದವೀಧರನಾಗಿದ್ದು, ಪ್ರತಿಷ್ಠಿತ ಬಾಲ್ಟಿಮೋರ್ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಮ್ಯಾಂಜಿಯೋನ್ ಪ್ರಸಿದ್ಧ ರಿಯಲ್ ಎಸ್ಟೇಟ್ ಡೆವಲಪರ್ ನಿಕೋಲಸ್ ಮ್ಯಾಂಜಿಯೋನ್ ಅವರ ಮೊಮ್ಮಗನಾಗಿದ್ದಾನೆ. ಮ್ಯಾಂಜಿಯೋನ್ ಅವರ ಲಿಂಕ್ಡ್ಇನ್ ಪ್ರೊಫೈಲ್ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆಂದು ಸೂಚಿಸುತ್ತದೆ.
ಅವರು ಕಳೆದ ನಾಲ್ಕು ವರ್ಷಗಳಿಂದ ಟ್ರೂಕಾರ್ (TrueCar) ನಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪ್ರೊಫೈಲ್ ಹೇಳುತ್ತದೆ. ಆದರೆ ಟ್ರೂಕಾರ್ ಕಂಪೆನಿಯು ಅವರು 2023ರಿಂದ ಕಂಪೆನಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.