ವ್ಯಾಗ್ನರ್ ಮುಖ್ಯಸ್ಥ ಪುಟಿನ್ ವಿರುದ್ಧ ಬಂಡೆದ್ದಿದ್ದು ಏಕೆ?: ಉಕ್ರೇನ್ ಪಾಲಿಗೆ ಇದರ ಅರ್ಥವೇನು?
Photo: Twitter
ಹೊಸದಿಲ್ಲಿ,ಜೂ.25: ಕಳೆದ 24 ಗಂಟೆಗಳು ರಶ್ಯದ ಪಾಲಿಗೆ ವಿಶೇಷವಾಗಿದ್ದವು. ಖಾಸಗಿ ಸೇನೆ ವ್ಯಾಗ್ನರ್ನ ಮುಖ್ಯಸ್ಥ ಯೆವಗೆನಿ ಪ್ರಿಗೊಝಿನ್ ಅವರು ಶುಕ್ರವಾರ ರಶ್ಯದ ಉನ್ನತ ಮಿಲಿಟರಿ ಅಧಿಕಾರಿಗಳ ವಿರುದ್ಧ ಇನ್ನಷ್ಟು ಕೆಂಡ ಕಾರಿದ್ದು,ಉಕ್ರೇನ್ ಆಕ್ರಮಣಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೀಡಿದ್ದ ಸಮರ್ಥನೆಯನ್ನು ತಿರಸ್ಕರಿಸಿದ್ದರು.
ರಶ್ಯದ ಮಿಲಿಟರಿ ನಾಯಕತ್ವವು ತನ್ನ ಪಡೆಗಳನ್ನು ಕೊಂದಿದೆ ಎಂದು ಟೆಲಿಗ್ರಾಮ್ನಲ್ಲಿ ಸರಣಿ ಆಡಿಯೊ ರೆಕಾರ್ಡಿಂಗ್ಗಳಲ್ಲಿ ಆರೋಪಿಸಿದ್ದ ಪ್ರಿಗೊಝಿನ್,ಪ್ರತೀಕಾರವನ್ನು ಕೈಗೊಳ್ಳಲು ಮಾಸ್ಕೋದತ್ತ ಮುನ್ನಡೆಯುವಂತೆ ತನ್ನ ಸೇನೆಗೆ ಆದೇಶಿಸಿದ್ದರು. ಆದಾಗ್ಯೂ ರಶ್ಯಾದಲ್ಲಿ ರಕ್ತಪಾತವನ್ನು ತಪ್ಪಿಸಲು ತನ್ನ ಪಡೆಗಳು ಮೂಲನೆಲೆಗೆ ಮರಳಲಿವೆ ಎಂದು ಪ್ರಿಗೊಝಿನ್ ಪ್ರಕಟಿಸುವುದರೊಂದಿಗೆ ಬಂಡಾಯವು ಶನಿವಾರ ಹಠಾತ್ ಅಂತ್ಯಗೊಂಡಿರುವಂತೆ ಕಂಡುಬಂದಿದೆ.
ಪ್ರಿಗೊಝಿನ್ ಪ್ರಕಟಣೆಯ ಬಳಿಕ ರಶ್ಯ ಸರಕಾರವು, ಅವರು ನೆರೆಯ ಬೆಲಾರೂಸ್ಗೆ ತೆರಳಲಿದ್ದಾರೆ ಮತ್ತು ಕಾನೂನು ಕ್ರಮವನ್ನು ಎದುರಿಸುವುದಿಲ್ಲ ಎಂದು ತಿಳಿಸಿದೆ.
ಬಂಡಾಯದ ವ್ಯಾಪಕ ಪರಿಣಾಮವನ್ನು ತಿಳಿಯುವುದು ಅಸಾಧ್ಯವಾಗಿದ್ದರೂ ಮತ್ತು ಅದು ಅಲ್ಪಾವಧಿಯದಾಗಿದ್ದರೂ ಅದು ಉಕ್ರೇನ್ಗೆ ಲಾಭದಾಯಕವಾಗುವ ಸಾಧ್ಯತೆಯಿದೆ.
ಉಕ್ರೇನ್ ತನ್ನ ಪ್ರತಿದಾಳಿಯನ್ನು ತೀವ್ರಗೊಳಿಸುತ್ತಿದ್ದಂತೆ ಗಮನ, ಶಸ್ತ್ರಾಸ್ತ್ರಗಳು ಮತ್ತು ಪಡೆಗಳನ್ನು ಮುಂಚೂಣಿಯಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಬಂಡಾಯವು ಅಲ್ಪಾವಧಿಯದಾಗಿದ್ದರೂ ರಶ್ಯದ ಜನರಲ್ಗಳು ಸ್ವದೇಶದಲ್ಲಿಯ ಬೆಳವಣಿಗೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಒತ್ತಡದಲ್ಲಿದ್ದಾರೆ.
ವ್ಯಾಗ್ನರ್ ರಶ್ಯದ ವಿದೇಶಾಂಗ ನೀತಿಯನ್ನು ಮತ್ತು ಶಕ್ತಿಯನ್ನು ಬಿಂಬಿಸುವಲ್ಲಿ ಪ್ರಮುಖ ಸಾಧನವಾಗಿತ್ತು. ಮಿತ್ರರಾಷ್ಟ್ರಗಳನ್ನು ಬೆಂಬಲಿಸುತ್ತಿದ್ದ ವ್ಯಾಗ್ನರ್ ರಶ್ಯದ ಸಂದೇಶಗಳನ್ನು ನಿರ್ಲಕ್ಷಿಸುವವರಿಗೆ ಎಚ್ಚರಿಕೆಗಳನ್ನು ನೀಡುತ್ತಿತ್ತು. ಈ ಬಂಡಾಯದಿಂದ ರವಾನೆಯಾಗಿರುವ ಸಂದೇಶಗಳನ್ನು ಪುಟಿನ್ ಕಡೆಗಣಿಸಿದರೂ ಅವರು ತಕ್ಷಣವೇ ವ್ಯಾಗ್ನರ್ ಬದಲಿಗೆ ಇನ್ನೊಂದು ಖಾಸಗಿ ಸೈನ್ಯವನ್ನು ತರುವ ಸಾಧ್ಯತೆಗಳು ಕಂಡು ಬರುತ್ತಿಲ್ಲ.
ವ್ಯಾಗ್ನರ್ ಬೆಂಬಲವನ್ನು ನೆಚ್ಚಿಕೊಂಡಿದ್ದ ನಾಯಕರು ಈಗ ತಮ್ಮ ಭದ್ರತೆಯನ್ನು ಮರುಪರಿಶೀಲಿಸುವ ಸಾಧ್ಯತೆಗಳಿವೆ.