ಉತ್ತರ ಕೊರಿಯಾಕ್ಕೆ ಏಕೆ ಶಸ್ತ್ರಾಸ್ತ್ರ ಪೂರೈಸಬಾರದು? : ಪುಟಿನ್ ಪ್ರಶ್ನೆ
ಕಿಮ್ ಜಾಂಗ್ ಉನ್, ವ್ಲಾದಿಮರ್ ಪುಟಿನ್ | Photo: NDTV
ಮಾಸ್ಕೋ : ಉಕ್ರೇನ್ಗೆ ಪಾಶ್ಚಿಮಾತ್ಯ ದೇಶಗಳು ಶಸ್ತ್ರಾಸ್ತ್ರ ಪೂರೈಸುತ್ತಿರುವ ರೀತಿಯಲ್ಲಿಯೇ ಅಗತ್ಯ ಬಿದ್ದರೆ ನಿಕಟ ಮಿತ್ರ ಉತ್ತರ ಕೊರಿಯಾಕ್ಕೆ ರಶ್ಯವೂ ಶಸ್ತ್ರಾಸ್ತ್ರ ಪೂರೈಸಲಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ನಿರ್ಬಂಧವನ್ನು ಉಲ್ಲಂಘಿಸಿ ಉತ್ತರ ಕೊರಿಯಾವು ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮವನ್ನು ಮುಂದುವರಿಸಿದೆ ಎಂದು ಖಂಡಿಸಿರುವ ಪಾಶ್ಚಿಮಾತ್ಯ ದೇಶಗಳು ಆ ದೇಶವನ್ನು ಜಾಗತಿಕ ವೇದಿಕೆಯಲ್ಲಿ ಪ್ರತ್ಯೇಕವಾಗಿಸಲು ನಿರ್ಧರಿಸಿವೆ. `ಇದನ್ನು ರಶ್ಯ ವಿರೋಧಿಸುತ್ತದೆ ಮತ್ತು ಪಾಶ್ಚಿಮಾತ್ಯರು ಉಕ್ರೇನ್ಗೆ ಒದಗಿಸುತ್ತಿರುವಂತೆಯೇ ಪಾಶ್ಚಿಮಾತ್ಯ ವಿರೋಧಿಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಲಿದೆ. ಈ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ. ಉತ್ತರ ಕೊರಿಯಾದ ಜತೆಗಿನ ತನ್ನ ಸ್ನೇಹವು ಪಶ್ಚಿಮಕ್ಕೆ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸಲಿದೆ' ಎಂದು ಪುಟಿನ್ ಹೇಳಿದ್ದಾರೆ. ಆದರೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಉತ್ತರ ಕೊರಿಯಾದ ಯೋಧರ ಸೇವೆಯನ್ನು ಬಳಸುವ ಅಗತ್ಯ ಕಾಣುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ಗೆ ಶಸ್ತ್ರಾಸ್ತ್ರ ಒದಗಿಸಲು ದಕ್ಷಿಣ ಕೊರಿಯಾ ಮುಂದಾದರೆ ಅದು ದೊಡ್ಡ ಪ್ರಮಾದವಾಗಲಿದೆ ಮತ್ತು ಈ ನಡೆಗೆ ರಶ್ಯದ ಪ್ರತಿಕ್ರಮವು ಆ ದೇಶಕ್ಕೆ ಚೇತರಿಸಿಕೊಳ್ಳಲಾಗದಷ್ಟು ನೋವುಂಟು ಮಾಡಲಿದೆ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.