ಟ್ರಂಪ್ಗೆ ಉಕ್ರೇನ್ ನ ಖನಿಜಗಳು ನಿಜಕ್ಕೂ ಏಕೆ ಬೇಕು?
ಉಕ್ರೇನ್ ನಲ್ಲಿ ಹೇರಳವಾಗಿವೆ ಗ್ಯಾಲಿಯಂ, ಗ್ರಾಫೈಟ್, ಲೀಥಿಯಂ

ಡೊನಾಲ್ಡ್ ಟ್ರಂಪ್ | PTI
ಹೊಸದಿಲ್ಲಿ: ಉಕ್ರೇನ್ ನ ಖನಿಜ ಸಂಪನ್ಮೂಲಗಳನ್ನು ಜಂಟಿಯಾಗಿ ಅಭಿವೃದ್ಧಿಗೊಳಿಸಲು ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಅಂಕಿತ ಬಿದ್ದಿರದ ಈ ಒಪ್ಪಂದವು ಉಕ್ರೇನ್ಗೆ ಯಾವುದೇ ಭದ್ರತಾ ಖಾತರಿಗಳನ್ನು ಒಳಗೊಂಡಿಲ್ಲ ಎಂದು ಭಾವಿಸಲಾಗಿದ್ದರೂ,ಅದು ರಷ್ಯಾದ ಆಕ್ರಮಣದ ವಿರುದ್ಧದ ತನ್ನ ಹೋರಾಟದಲ್ಲಿ ಅಮೆರಿಕದ ನಿರಂತರ ಬೆಂಬಲಕ್ಕೆ ಮಾರ್ಗವನ್ನು ಸುಗಮಗೊಳಿಸುತ್ತದೆ ಎಂದು ಉಕ್ರೇನ್ ಆಶಿಸಿದೆ.
ಉಕ್ರೇನ್ ನ ಅಪರೂಪದ ಮತ್ತು ಮಹತ್ವದ ಖನಿಜಗಳಿಂದ 500 ಬಿಲಿಯನ್ ಡಾಲರ್ ಆದಾಯದ ಹಕ್ಕುಗಳಿಗಾಗಿ ಟ್ರಂಪ್ ಅವರ ಹಿಂದಿನ ಬೇಡಿಕೆಯನ್ನೂ ಈ ಒಪ್ಪಂದವು ಒಳಗೊಂಡಿಲ್ಲ ಎಂಬಂತೆ ಕಾಣುತ್ತಿದೆ. ಆದರೆ ಒಪ್ಪಂದವು ಅಮೆರಿಕಕ್ಕೆ 21ನೇ ಶತಮಾನದ ಆರ್ಥಿಕತೆಯಲ್ಲಿ ಅಗತ್ಯ ಸಂಪನ್ಮೂಲಗಳನ್ನು ಲಭ್ಯವಾಗಿಸಲು ನೆರವಾಗಿಸಲಿದೆ. ಅಮೆರಿಕವು ಪ್ರಸ್ತುತ ಈ ಸಂಪನ್ಮೂಲಗಳಿಗಾಗಿ ಇತರ ದೇಶಗಳಿಂದ, ವಿಶೇಷವಾಗಿ ಚೀನಾದಿಂದ ಪೂರೈಕೆಗಳನ್ನು ಹೆಚ್ಚು ಅವಲಂಬಿಸಿದೆ.
ಗ್ಯಾಲಿಯಮ್ನಂತಹ ಅಪರೂಪದ ಖನಿಜಗಳು ಆಧುನಿಕ ರಕ್ಷಣಾ ತಂತ್ರಜ್ಞಾನಗಳಿಗೆ ನಿರ್ಣಾಯಕವಾಗಿವೆ. ಆದರೆ ಅವು ದೇಶಿಯವಾಗಿ ಅಮೆರಿಕದಲ್ಲಿ ಸಿದ್ಧರೂಪದಲ್ಲಿ ಲಭ್ಯವಿಲ್ಲ. ಗ್ಯಾಲಿಯಮ್ನ ಪ್ರಮುಖ ಪೂರೈಕೆದಾರ ದೇಶವಾಗಿರುವ ಚೀನಾ ಈ ಖನಿಜಗಳ ಮೇಲಿನ ತನ್ನ ನಿಯಂತ್ರಣವನ್ನು ಅಮೆರಿಕದ ವಿರುದ್ಧ ಕಡಿವಾಣವಾಗಿ ಬಳಸಿಕೊಂಡಿದೆ. ತನ್ನ ಸರಕುಗಳ ಮೇಲೆ ಅಮೆರಿಕದ ಸುಂಕಗಳ ಹೆಚ್ಚಳಕ್ಕೆ ಪ್ರತೀಕಾರವಾಗಿ ಚೀನಾ ಅದಕ್ಕೆ ಅಪರೂಪದ ಖನಿಜಗಳ ರಫ್ತನ್ನು ನಿಷೇಧಿಸಿದೆ.
ಕ್ಷಿಪಣಿ ವ್ಯವಸ್ಥೆ,ಇಲೆಕ್ಟ್ರಾನಿಕ್ಸ್ ಮತ್ತು ವಿದ್ಯುತ್ ವಾಹನಗಳಂತಹ ಮಿಲಿಟರಿ ತಂತ್ರಜ್ಞಾನಕ್ಕೆ ಇತರ ಖನಿಜಗಳು ಮಹತ್ವದ್ದಾಗಿವೆ. ಐರೋಪ್ಯ ಒಕ್ಕೂಟವು ನಿರ್ಣಾಯಕವೆಂದು ಗುರುತಿಸಿರುವ 34 ಖನಿಜಗಳ ಪೈಕಿ 22 ಖನಿಜಗಳ ನಿಕ್ಷೇಪಗಳು ಉಕ್ರೇನ್ ನಲ್ಲಿವೆ.
ಪ್ರಸ್ತುತ ಕೆಲವು ಮಹತ್ವದ ಖನಿಜಗಳ ಆಮದುಗಳಲ್ಲಿ ಚೀನಾ ದೊಡ್ಡ ಪಾಲನ್ನು ಹೊಂದಿರುವುದು ಅಮೆರಿಕದ ಸಮಸ್ಯೆಯಾಗಿದೆ. ಹೀಗಾಗಿ ಟ್ರಂಪ್ ಉಕ್ರೇನ್ ಯುದ್ಧಕ್ಕೆ ಪರಿಹಾರವನ್ನು ನಿರ್ಣಾಯಕ ಖನಿಜಗಳ ಪರ್ಯಾಯ ಮೂಲಗಳನ್ನು ಪಡೆದುಕೊಳ್ಳಲು ಅವಕಾಶವನ್ನಾಗಿ ನೋಡುತ್ತಿದ್ದಾರೆ. ಇದು ಈ ಖನಿಜಗಳಿಗಾಗಿ ಚೀನಾದ ಮೇಲಿನ ಅಮೆರಿಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಚೀನಾದ ವಿರುದ್ಧ ಹೆಚ್ಚು ಆಕ್ರಮಣಕಾರಿ ನಿಲುವನ್ನು ತಳೆಯಲು ಟ್ರಂಪ್ಗೆ ನೆರವಾಗುತ್ತದೆ. ಈ ಪ್ರಮುಖ ಖನಿಜಗಳ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಚೀನಾ ಅಮೆರಿಕದ ಸುಂಕಗಳ ವಿರುದ್ಧ ಇಷ್ಟೊಂದು ತ್ವರಿತವಾಗಿ ತಿರುಗೇಟು ನೀಡುತ್ತದೆ ಎಂದು ಟ್ರಂಪ್ ಊಹಿಸಿರಲಿಕ್ಕಿಲ್ಲ.
ಗ್ಯಾಲಿಯಂ ವಿಶ್ವಾಸಾರ್ಹ ಮತ್ತು ಬಾಳಿಕೆ ಬರುವ ಖನಿಜವಾಗಿರುವುದರಿಂದ ರಕ್ಷಣಾ ಉತ್ಪಾದನೆ ಉದ್ಯಮದ ಪಾಲಿಗೆ ಅದು ಮೌಲ್ಯಯುತವಾಗಿದೆ. ನಿರ್ದಿಷ್ಟವಾಗಿ ಗ್ಯಾಲಿಯಂ ಅನ್ನು ರಾಡಾರ್,ಉಪಗ್ರಹ ಸಂವಹನ ವ್ಯವಸ್ಥೆಗಳು ಮತ್ತು ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನು ವರ್ಧಿಸುವ ನಿರ್ಣಾಯಕ ಸಾಧನವಾಗಿ ಪರಿಗಣಿಸಲಾಗಿದೆ. ಇದನ್ನು ಪಥದರ್ಶನ ಮತ್ತು ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಗಳು ಉಪಯೋಗಿಸುವ ಮಲ್ಟಿ-ಚಿಪ್ ಮಾಡ್ಯೂಲ್ಗಳಲ್ಲಿಯೂ ಬಳಸಲಾಗುತ್ತದೆ.
ಗ್ಯಾಲಿಯಂ ಜೊತೆಗೆ ಉಕ್ರೇನ್ ವಿದ್ಯುತ್ ವಾಹನಗಳು ಮತ್ತು ಪರಮಾಣು ರಿಯಾಕ್ಟರ್ಗಳ ನಿರ್ಮಾಣದಲ್ಲಿ ಬಳಕೆಯಾಗುವ ಗ್ರಾಫೈಟ್ನ ಅಪಾರ ಸಂಪನ್ಮೂಲಗಳನ್ನೂ ಹೊಂದಿದೆ ಮತ್ತು ಯುರೋಪ್ನ ಲೀಥಿಯಂ ಪೂರೈಕೆಯಲ್ಲಿ ಮೂರನೇ ಒಂದು ಪಾಲನ್ನು ಹೊಂದಿದೆ. ಲೀಥಿಯಂ ಬ್ಯಾಟರಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.
ನಿರ್ಣಾಯಕ ಖನಿಜಗಳ ಮೇಲೆ ಟ್ರಂಪ್ ಗಮನವನ್ನು ಕೇಂದ್ರೀಕರಿಸಿರುವುದು ಅವರು ಗ್ರೀನ್ಲ್ಯಾಂಡ್ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸುವಂತೆ ಮಾಡಿದೆ. ಗ್ರೀನ್ಲ್ಯಾಂಡ್ ನಿರ್ಣಾಯಕ ಖನಿಜಗಳ ಗಮನಾರ್ಹ ನಿಕ್ಷೇಪಗಳನ್ನು ಹೊಂದಿರುವುದು ಅದನ್ನು ಚೀನಿ ನಿಯಂತ್ರಿತ ಖನಿಜ ಸಂಪನ್ಮೂಲಗಳಿಗೆ ಪರ್ಯಾಯವನ್ನಾಗಿಸಿದೆ.
ಸೌಜನ್ಯ : scroll.in