ಮಧ್ಯಪ್ರಾಚ್ಯದಾದ್ಯಂತ ವ್ಯಾಪಕ ಪ್ರತಿಭಟನೆ: ಗಾಝಾ ಆಸ್ಪತ್ರೆ ಮೇಲಿನ ದಾಳಿಗೆ ಖಂಡನೆ
Photo- PTI
ಗಾಝಾ ಸಿಟಿ: ಗಾಝಾ ಪಟ್ಟಿಯ ಖಾನ್ಯೂನಿಸ್ನ ಆಸ್ಪತ್ರೆಯ ಮೇಲೆ ಮಂಗಳವಾರ ತಡರಾತ್ರಿ ನಡೆದ ಭೀಕರ ವಾಯುದಾಳಿಯನ್ನು ಖಂಡಿಸಿ ಮಧ್ಯಪ್ರಾಚ್ಯದಾದ್ಯಂತ ಇಸ್ರೇಲ್-ವಿರೋಧಿ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.
ಆಸ್ಪತ್ರೆಯ ಮೇಲಿನ ಬಾಂಬ್ದಾಳಿಯಲ್ಲಿ 500ಕ್ಕೂ ಅಧಿಕ ಫೆಲೆಸ್ತೀನೀಯರು ಮೃತರಾಗಿದ್ದರು.
ಪಶ್ಚಿಮ ದಂಡೆಯ ರಮಲ್ಲಾದ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಫೆಲೆಸ್ತೀನಿಯನ್ ಯುವಕರು ಇಸ್ರೇಲಿ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಫೆಲೆಸ್ತೀನಿಯನ್ ಅಧಿಕಾರಿಗಳು ಹೇಳಿದ್ದಾರೆ. ಲೆಬನಾನ್ನಲ್ಲಿ ಬೈರೂತ್ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಬಳಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆ ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರು. `ಅಮೆರಿಕ ನಿಜವಾದ ಸೈತಾನ. ಯಾಕೆಂದರೆ ಅದು ಇಸ್ರೇಲನ್ನು ಬೆಂಬಲಿಸುತ್ತದೆ ಮತ್ತು ಎಲ್ಲಾ ಜಗತ್ತೂ ಕುರುಡಾಗಿದೆ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇರಾನ್ನಲ್ಲೂ ಆಡಳಿತದ ಬೆಂಬಲದಿಂದ ದೇಶದಾದ್ಯಂತ ಪ್ರತಿಭಟನೆ ನಡೆದಿದೆ. `ಅಮೆರಿಕದ ಅವಸಾನ' `ಇಸ್ರೇಲ್ನ ಅವಸಾನ' ಎಂಬ ಬರಹವುಳ್ಳ ಬ್ಯಾನರ್ ಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. `ಈ ಯುದ್ಧದಲ್ಲಿ ಕೊಲ್ಲಲ್ಪಟ್ಟ ಫೆಲೆಸ್ತೀನೀಯರ ಪ್ರತೀ ಹನಿ ರಕ್ತವೂ ಯೆಹೂದ್ಯರ (ಇಸ್ರೇಲ್) ಆಡಳಿತವನ್ನು ಅದರ ಪತನದ ಹತ್ತಿರಕ್ಕೆ ತರುತ್ತಿದೆ' ಎಂದು ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ನೀಡಿದ ಸಂದೇಶದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದಾರೆ.
ಇರಾಕ್ನಲ್ಲಿ ಅಮೆರಿಕದ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವ ಸೇತುವೆಯ ಬಳಿ ಸುಮಾರು 300 ಜನರ ಗುಂಪು ಪ್ರತಿಭಟನೆ ನಡೆಸಿದೆ. ಜೋರ್ಡಾನ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಸ್ರೇಲ್ ರಾಯಭಾರಿ ಕಚೇರಿಯತ್ತ ಜಾಥಾ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. `ಭಯೋತ್ಪಾದಕ ಇಸ್ರೇಲ್ಗೆ ನೀಡುವ ಬೆಂಬಲ ಸೋಲು ಮತ್ತು ವಿನಾಶಕ್ಕೆ ಕಾರಣವಾಗಲಿದೆ ಎಂಬುದನ್ನು ಅಮೆರಿಕ ತಿಳಿದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಹಂತದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಪ್ರತಿಭಟನಾಕಾರರು ಪೊಲೀಸರ ಜತೆ ಘರ್ಷಣೆಗೆ ಇಳಿದರು. ರಾಯಭಾರಿ ಕಚೇರಿಯ ಬಳಿ ಪ್ರತಿಭಟನಾಕಾರರು ಬೆಂಕಿಹಚ್ಚಿದ್ದು ಹಲವಾರು ಪೊಲೀಸರು ಗಾಯಗೊಂಡರು. ಅರಬ್ ಭೂಮಿಯಲ್ಲಿ ಯೆಹೂದ್ಯರ ರಾಯಭಾರಿ ಕಚೇರಿ ಇರಬಾರದು ಎಂದು ಪ್ರತಿಭಟಕಾರರು ಆಕ್ರೋಶ ವ್ಯಕ್ತಪಡಿಸಿದರು.
ತೂನಿಸ್ನಲ್ಲಿ ಪ್ರತಿಭಟನಾಕಾರರು ಇಸ್ರೇಲ್ ಮತ್ತು ಅಮೆರಿಕದ ಧ್ವಜಕ್ಕೆ ಬೆಂಕಿಹಚ್ಚಿದರು ಮತ್ತು ಇಸ್ರೇಲ್ ಗೆ ಬೇಷರತ್ ಬೆಂಬಲ ನೀಡಿರುವ ಅಮೆರಿಕ, ಫ್ರಾನ್ಸ್ ರಾಯಭಾರಿಗಳನ್ನು ಉಚ್ಛಾಟಿಸಲು ಆಗ್ರಹಿಸಿದರು. ಯೆಮನ್ನಲ್ಲಿ ಸಾವಿರಾರು ಪ್ರತಿಭಟನಾಕಾರರು ರಾಜಧಾನಿ ಸನಾದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದು ಫೆಲೆಸ್ತೀನೀಯರಿಗೆ ಬೆಂಬಲ ಘೋಷಿಸಿದರು. ಲೆಬನಾನ್ನ ಬೆರೂತ್ನ ದಕ್ಷಿಣಪ್ರಾಂತದಲ್ಲಿ ಹಿಜ್ಬುಲ್ಲಾ ನಿಯಂತ್ರಣದ ಪ್ರದೇಶಗಳಲ್ಲಿ ಹಿಜ್ಬುಲ್ಲಾ, ಫೆಲೆಸ್ತೀನಿಯನ್ ಮತ್ತು ಲೆಬನಾನ್ನ ಧ್ವಜಗಳನ್ನು ಬೀಸುತ್ತಾ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು.
ಪ್ರದರ್ಶನಗಳು ಮಧ್ಯಪ್ರಾಚ್ಯ ಅಥವಾ ಮುಸ್ಲಿಂ ಜಗತ್ತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕದನ ವಿರಾಮಕ್ಕೆ ಒತ್ತಡ ಹೇರಬೇಕೆಂದು ಆಗ್ರಹಿಸಿ `ಶಾಂತಿಗಾಗಿ ಯೆಹೂದ್ಯರ ಧ್ವನಿ' ಸಂಘಟನೆಯ ನೂರಾರು ಯಹೂದಿ ಶಾಂತಿ ಕಾರ್ಯಕರ್ತರು ಅಮೆರಿಕದ ವಾಶಿಂಗ್ಟನ್ನಲ್ಲಿ ಜಾಥಾ ನಡೆಸಿ ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿದರು. ವಾಶಿಂಗ್ಟನ್ ಡಿಸಿಯ ಇಂಡಿಪೆಂಡೆನ್ಸ್ ಅವೆನ್ಯೂ ರಸ್ತೆಯಲ್ಲಿ ಸುಮಾರು 500 ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು.