ಲಾಸ್ ಏಂಜಲೀಸ್ನಲ್ಲಿ ತೀವ್ರಗೊಂಡ ಕಾಡ್ಗಿಚ್ಚು: 30,000 ಮಂದಿಯ ಸ್ಥಳಾಂತರ
PC : PTI\AP
ನ್ಯೂಯಾರ್ಕ್ : ಅಮೆರಿಕದ ಲಾಸ್ಏಂಜಲೀಸ್ನಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ಕಾಡ್ಗಿಚ್ಚಿನಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು ಹಲವೆಡೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. 30,000ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಂಟಾ ಮೋನಿಕಾ ಮತ್ತು ಮಾಲಿಬು ಕರಾವಳಿಯ ವಸಾಹತುಗಳ ನಡುವಿನ ಪೆಸಿಫಿಕ್ ಕರಾವಳಿ ಪ್ರದೇಶದ ಕನಿಷ್ಠ 2,921 ಎಕರೆ ಪ್ರದೇಶ ಕಾಡ್ಗಿಚ್ಚಿನಲ್ಲಿ ಸುಟ್ಟುಹೋಗಿದೆ. ಈ ಭಾಗದಲ್ಲಿ ಬೀಸುತ್ತಿರುವ ಬಿರುಗಾಳಿಯು ಕಾಡ್ಗಿಚ್ಚು ಕ್ಷಿಪ್ರ ಗತಿಯಲ್ಲಿ ಮುಂದುವರಿಯಲು ಪೂರಕವಾಗಿದೆ. ಸಾಂಟಾ ಮೋನಿಕಾ ನಗರದ ಉತ್ತರ ಭಾಗದ ನಿವಾಸಿಗಳನ್ನು ತೆರವುಗೊಳಿಸಲಾಗಿದೆ.
ಹಲವು ಮನೆಗಳು ಹಾಗೂ ವಾಹನಗಳು ಸುಟ್ಟುಹೋಗಿವೆ. ವಿಮಾನ ಹಾಗೂ ಹೆಲಿಕಾಪ್ಟರ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನ ಮುಂದುವರಿದಿದೆ. ರಸ್ತೆಯಲ್ಲಿ ಉರಿಯುತ್ತಿರುವ ವಾಹನಗಳನ್ನು ಬುಲ್ಡೋಝರ್ ಮೂಲಕ ತೆರವುಗೊಳಿಸಿ ತುರ್ತು ಅಗತ್ಯದ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಾಸ್ ಏಂಜಲೀಸ್ನ ಗೆಟ್ಟಿ ವಿಲ್ಲಾ ಮ್ಯೂಸಿಯಂ ಸುತ್ತಮುತ್ತಲಿನ ಕಸಕಡ್ಡಿ, ಪೊದೆಗಳನ್ನು ತೆರವುಗೊಳಿಸಿ ಬೆಂಕಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಲಾಸ್ ಏಂಜಲೀಸ್ನಲ್ಲಿ ಗುರುವಾರ ಗಂಟೆಗೆ 130 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿರುವುದಾಗಿ ಗವರ್ನರ್ ಕಚೇರಿ ಹೇಳಿದೆ.