ಅಮೆರಿಕದ ಬೇಹುಗಾರಿಕೆ ವಿಮಾನ ಹೊಡೆದುರುಳಿಸುತ್ತೇವೆ: ಉತ್ತರ ಕೊರಿಯಾ ಎಚ್ಚರಿಕೆ
Photo: NDTV.com
ಪ್ಯೋಂಗ್ಯಾಂಗ್: ತನ್ನ ವಾಯುಪ್ರದೇಶವನ್ನು ಉಲ್ಲಂಘಿಸುವ ಅಮೆರಿಕದ ಬೇಹುಗಾರಿಕಾ ವಿಮಾನಗಳನ್ನು ಹೊಡೆದುರುಳಿಸಲಾಗುವುದು ಎಂದು ಉತ್ತರ ಕೊರಿಯಾ ಸೋಮವಾರ ಎಚ್ಚರಿಕೆ ನೀಡಿದ್ದು, ಕೊರಿಯನ್ ಪರ್ಯಾಯ ದ್ವೀಪದ ಬಳಿ ಪರಮಾಣು ಕ್ಷಿಪಣಿ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸುವ ಅಮೆರಿಕದ ಯೋಜನೆಯನ್ನು ಖಂಡಿಸಿದೆ.
ಅಮೆರಿಕವು ಯುದ್ಧಕಾಲದ ಮಟ್ಟವನ್ನು ಮೀರಿ ಬೇಹುಗಾರಿಕೆ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಅಮೆರಿಕದ ಬೇಹುಗಾರಿಕಾ ವಿಮಾನಗಳು ಈ ತಿಂಗಳು ನಿರಂತರ 8 ದಿನ ಪ್ರಚೋದನಕಾರಿ ಹಾರಾಟ ನಡೆಸಿವೆ. ಒಂದು ವಿಮಾನವು ಪೂರ್ವ ಸಮುದ್ರದ ಬಳಿ ಉತ್ತರ ಕೊರಿಯಾದ ವಾಯುಪ್ರದೇಶವನ್ನು ಹಲವು ಬಾರಿ ಉಲ್ಲಂಘಿಸಿದೆ. ಈ ಹಿಂದೆ ನಾವು ಅಮೆರಿಕ ವಾಯುಪಡೆಯ ಕಾರ್ಯತಂತ್ರದ ವಿಚಕ್ಷಣ ವಿಮಾನವನ್ನು ಹೊಡೆದುರುಳಿಸಿದ ಪ್ರಕರಣ ಕೊರಿಯಾದ ಪೂರ್ವ ಸಮುದ್ರದಲ್ಲಿ ಘಟಿಸದು ಎಂಬುದಕ್ಕೆ ಯಾವುದೇ ಖಾತರಿ ನೀಡಲಾಗದು. ಅಮೆರಿಕವು ಉನ್ಮಾದದ ಬೇಹುಗಾರಿಕೆಗೆ ಸೂಕ್ತ ಬೆಲೆ ತೆರಲಿದೆ ಎಂದು ಉತ್ತರ ಕೊರಿಯಾದ ಭದ್ರತಾ ಇಲಾಖೆಯ ವಕ್ತಾರರನ್ನು ಉಲ್ಲೇಖಿಸಿ ಕೆಸಿಎನ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಕೊರಿಯಾ ಪರ್ಯಾಯ ದ್ವೀಪದಲ್ಲಿ ತನ್ನ ಪರಮಾಣು ಶಸ್ತ್ರಾಸ್ತ್ರವನ್ನು ನಿಯೋಜಿಸುವ ಅಮೆರಿಕದ ಯೋಜನೆಯನ್ನು ಖಂಡಿಸಿರುವ ಉತ್ತರ ಕೊರಿಯಾ, ಇದು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಭಾರೀ ಬೆದರಿಕೆಯಾಗಿದೆ ಎಂದು ಹೇಳಿಕೆ ತಿಳಿಸಿದೆ. ದಕ್ಷಿಣ ಕೊರಿಯಾ ಬಂದರಿಗೆ ಪರಮಾಣುಶಕ್ತ ಬ್ಯಾಲಿಸ್ಟಿಕ್ ಸಬ್ಮೆರಿನ್ ಅನ್ನು ರವಾನಿಸುವುದಾಗಿ ಅಮೆರಿಕ ಎಪ್ರಿಲ್ನಲ್ಲಿ ಹೇಳಿತ್ತು.