34 ಆರೋಪಗಳಲ್ಲಿ ʼತಪ್ಪಿತಸ್ಥʼ ಟ್ರಂಪ್ ಜೈಲು ಪಾಲಾಗುತ್ತಾರೆಯೇ?
Photo: x.com/piersmorgan
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಕ್ಷೆಗೆ ಒಳಗಾದ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ತಮ್ಮ ವಿರುದ್ಧ ಆರೋಪ ಮಾಡಿದ ಅಶ್ಲೀಲ ಚಿತ್ರಗಳ ತಾರೆಯ ಬಾಯಿ ಮುಚ್ಚಿಸಲು ಹಣ ನೀಡುವ ಸಲುವಾಗಿ ವ್ಯವಹಾರದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ಆರೋಪ ಸಾಬೀತಾಗಿದ್ದು, ಎಲ್ಲ 34 ಆರೋಪಗಳಲ್ಲೂ ಟ್ರಂಪ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ಐತಿಹಾಸಿಕ ತೀರ್ಪಿನ ಬಳಿಕ ಇದರ ಕಾನೂನಾತ್ಮಕ ಮತ್ತು ರಾಜಕೀಯ ಪರಿಣಾಮಗಳ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ. ಜೋ ಬೈಡೇನ್ ವಿರುದ್ಧ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹದಲ್ಲಿರುವ ಟ್ರಂಪ್ ಗೆ ಶಿಕ್ಷೆ ವಿಧಿಸುವುದು ಹಾಗೂ ಮೇಲ್ಮನವಿ ಸಲ್ಲಿಸುವುದು ಟ್ರಂಪ್ ಮುಂದಿರುವ ಕಾನೂನಾತ್ಮಕ ಪಯಣದ ಆರಂಭ ಎನಿಸಲಿದೆ. ಟ್ರಂಪ್ ಅವರ ಭವಿಷ್ಯದ ಬಗ್ಗೆ ಹಲವು ಚರ್ಚೆ ಹಾಗೂ ವದಂತಿಗಳಿಗೆ ಈ ತೀರ್ಪು ಕಾರಣವಾಗಿದೆ.
ಈ ತೀರ್ಪನ್ನು ಮಾನ್ಯ ಮಾಡಿ, ಅಂತಿಮ ತೀರ್ಪು ನೀಡುವುದು ನ್ಯಾಯಾಧೀಶ ಜುವಾನ್ ಮೆರ್ಚನ್ ಅವರ ಮುಂದಿರುವ ಆಯ್ಕೆ. ಇದು ಕೇವಲ ಔಪಚಾರಿಕ ಮಾತ್ರ. ಕೆಲ ವಾರಗಳಲ್ಲೇ ಸಾಮಾನ್ಯವಾಗಿ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಕಾನೂನಾತ್ಮಕ ವಾದಗಳು ಈ ಪ್ರಕ್ರಿಯೆಯನ್ನು ವಿಳಂಬಿಸಬಲ್ಲವು. ಉಭಯ ಕಡೆಗಳ ವಕೀಲರು ಶಿಕ್ಷೆಯನ್ನು ಶಿಫಾರಸ್ಸು ಮಾಡುತ್ತಾರೆ. ಶಿಕ್ಷೆಯನ್ನು ಪ್ರಕಟಿಸುವ ಮುನ್ನ ನ್ಯಾಯಾಧೀಶರು ಈ ಬಗ್ಗೆ ಶಿಕ್ಷಾ ವಿಚಾರಣೆಯನ್ನು ನಡೆಸುತ್ತಾರೆ. ಬಳಿಕ ಅಂತಿಮ ನಿರ್ಧಾರ ಪ್ರಕಟಿಸುತ್ತಾರೆ.
ಟ್ರಂಪ್ ಜೈಲು ಪಾಲಾಗುತ್ತಾರೆಯೇ ಎಂಬ ಪ್ರಶ್ನೆಗೆ ಮೇಲ್ನೋಟಕ್ಕೆ ಸಿಗುವ ಉತ್ತರ ಇಲ್ಲ ಎನ್ನುವುದು. ವ್ಯವಹಾರದ ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದಕ್ಕೆ ಗರಿಷ್ಠ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಪ್ರಥಮ ಬಾರಿಗೆ ಅಪರಾಧ ಎಸಗಿರುವ ವ್ಯಕ್ತಿ ನ್ಯೂಯಾರ್ಕ್ ನಲ್ಲಿ ಜೈಲುಪಾಲಾದ ನಿದರ್ಶನಗಳು ವಿರಳ. ದಂಡ ಹಾಗೂ ಪ್ರೊಬೇಷನ್ ನಂತಹ ಶಿಕ್ಷೆಗಳು ಸಾಮಾನ್ಯ. ಗೃಹಬಂಧನದಂತಹ ಶಿಕ್ಷೆಯನ್ನು ಕೂಡಾ ಪರಿಗಣಿಸಬಹುದಾಗಿದೆ. ಜೀವಿತಾವಧಿಯ ರಹಸ್ಯ ಸೇವಾ ವಿವರಗಳನ್ನು ಹೊಂದಿದ ಮಾಜಿ ಅಧ್ಯಕ್ಷರಿಗೆ ಜೈಲು ಶಿಕ್ಷೆ ವಿಧಿಸುವುದು ಸವಾಲುದಾಯಕ ಎನಿಸಲಿದೆ.