ವಿಶ್ವ ಬಾಕ್ಸಿಂಗ್ ಕಪ್ 2025 | ಸೋಲಿನೊಂದಿಗೆ ಭಾರತದ ಅಭಿಯಾನ ಆರಂಭ

ಲಕ್ಷ್ಯ ಚಾಹರ್ | PC : PTI
ಫೋಝ್ ಡೂ ಈಗ್ವಾಸೂ (ಬ್ರೆಝಿಲ್): ಲಕ್ಷ್ಯ ಚಾಹರ್ರ ಸೋಲಿನೊಂದಿಗೆ ಭಾರತವು ತನ್ನ ವಿಶ್ವ ಬಾಕ್ಸಿಂಗ್ ಕಪ್ 2025 ಅಭಿಯಾನವನ್ನು ನಿರಾಶಾದಾಯಕವಾಗಿ ಆರಂಭಿಸಿದೆ. ಚಾಹರ್ ರನ್ನು 80 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬ್ರೆಝಿಲ್ ನ ವಾಂಡರ್ಲಿ ಪೆರೇರ 5-0 ಅಂಕಗಳಿಂದ ಸೋಲಿಸಿದರು.
ಹಾಲಿ ರಾಷ್ಟ್ರೀಯ ಲೈಟ್ ಹೆವಿವೇಟ್ ಚಾಂಪಿಯನ್ ಚಾಹರ್, ಪೆರೇರರಿಂದ ಕಠಿಣ ಸವಾಲನ್ನು ಎದುರಿಸಿದರು. ಪೆರೇರ 2023ರ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತರಾಗಿದ್ದಾರೆ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ.
ಪೆರೇರ ಅವರು ಚಾಹರ್ರನ್ನು ಸಮಗ್ರವಾಗಿ ಸೋಲಿಸಿದರು. ಒಬ್ಬರನ್ನು ಹೊರತುಪಡಿಸಿ ಎಲ್ಲಾ ತೀರ್ಪುಗಾರರು ಅವರಿಗೆ 30 ಅಂಕಗಳನ್ನು ನೀಡಿದರು. ಅವರು 150 ಅಂಕಗಳ ಪೈಕಿ 149 ಅಂಕಗಳನ್ನು ಗಳಿಸಿದರು. ಚಾಹರ್ 135 ಅಂಕಗಳನ್ನು ಪಡೆದರು.
ವಿಶ್ವ ಬಾಕ್ಸಿಂಗ್ ಕಪ್ನಲ್ಲಿ ಈ ಸೋಲು ಭಾರತಕ್ಕೆ ಸವಾಲಿನ ಆರಂಭವನ್ನು ಒದಗಿಸಿದೆ. ಇದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಫೆಬ್ರವರಿಯಲ್ಲಿ ವಿಶ್ವ ಬಾಕ್ಸಿಂಗ್ ಗೆ ತಾತ್ಕಾಲಿಕ ಮಾನ್ಯತೆಯನ್ನು ನೀಡಿದ ಬಳಿಕ ಅದು ನಡೆಸುತ್ತಿರುವ ಮೊದಲ ಪಂದ್ಯಾವಳಿಯಾಗಿದೆ.
ಅದೂ ಅಲ್ಲದೆ, ಹೊಸ ತೂಕ ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಬಾಕ್ಸರ್ ಗಳಿಗೆ ಈ ಪಂದ್ಯಾವಳಿಯು ಮೊದಲ ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದೆ.