ಕಾಂಗೋದಲ್ಲಿ ನಿಗೂಢ ರೋಗಕ್ಕೆ 50ಕ್ಕೂ ಅಧಿಕ ಬಲಿ | ಕಟ್ಟೆಚ್ಚರ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

PC :WHO
ವಿಶ್ವಸಂಸ್ಥೆ: ಕಾಂಗೋ ಗಣರಾಜ್ಯದಲ್ಲಿ ನಿಗೂಢ ಕಾಯಿಲೆ ಉಲ್ಬಣಿಸಿದ್ದು ಆರೋಗ್ಯ ತಜ್ಞರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ರೋಗ ಲಕ್ಷಣಗಳು ಮತ್ತು ಸಾವಿನ ನಡುವೆ ಸಣ್ಣ ಅಂತರ ಇರುವುದು ವಿಶೇಷವಾಗಿ ಆತಂಕಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಮೂರು ಮಕ್ಕಳು ಬಾವಲಿಯ ಮಾಂಸವನ್ನು ತಿಂದ ನಂತರ ಮೊದಲ ಬಾರಿಗೆ ಈ ಕಾಯಿಲೆ ವರದಿಯಾಗಿದ್ದು ಕೇವಲ ಐದು ವಾರಗಳಲ್ಲೇ 53 ಮಂದಿಯ ಸಾವಿಗೆ ಕಾರಣವಾಗಿದೆ. ಕಾಂಗೋ ಗಣರಾಜ್ಯದ ಈಕ್ವಟೂರ್ ಪ್ರಾಂತದ ಹಳ್ಳಿಗಳಲ್ಲಿ ಫೆಬ್ರವರಿ 16ರ ವೇಳೆಗೆ 431 ಪ್ರಕರಣ ಮತ್ತು 50ಕ್ಕೂ ಅಧಿಕ ಸಾವು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಜ್ವರ, ವಾಂತಿ, ಆಂತರಿಕ ರಕ್ತಸ್ರಾವ ಕಾಯಿಲೆಯ ಲಕ್ಷಣಗಳಾಗಿದ್ದು ಬಹುತೇಕ ರೋಗಿಗಳು ರೋಗಲಕ್ಷಣ ಕಾಣಿಸಿಕೊಂಡ 48 ಗಂಟೆಗಳಲ್ಲೇ ಸಾವನ್ನಪ್ಪಿದ್ದಾರೆ. ರೋಗಲಕ್ಷಣ ಮತ್ತು ಸಾವಿನ ನಡುವಿನ ಈ ಕಿರು ಅಂತರ ಆತಂಕಕಾರಿಯಾಗಿದೆ ಎಂದು ಬಿಕೊರೊ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸೆರ್ಗೆ ಎಂಗಲೆಬಟೊ ಹೇಳಿದ್ದಾರೆ.
ಪ್ರಕರಣಗಳು ಕೆಲವೇ ದಿನಗಳಲ್ಲಿ ವೇಗವಾಗಿ ಏರಿಕೆಯಾಗಿರುವುದು ಸಾರ್ವಜನಿಕ ಆರೋಗ್ಯಕ್ಕೆ ಗಮನಾರ್ಹ ಅಪಾಯವನ್ನುಂಟು ಮಾಡುತ್ತದೆ. ರೋಗದ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇದು ಮತ್ತೊಂದು ಸೋಂಕುರೋಗವೇ ಅಥವಾ ವ್ಯತಿರಿಕ್ತ ಜೈವಿಕ ಪರಿಣಾಮವನ್ನು ಉಂಟು ಮಾಡುವ ವಿಷಕಾರಿ ಅಂಶವೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ನಾವು ಏನು ಮಾಡಬಹುದು, ಯಾವ ಹಂತದಲ್ಲಿ ನಾವು ಬೆಂಬಲಿಸಬಹುದು ಎಂಬುದನ್ನು ನೋಡಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ಏಕಾಏಕಿ ಉಲ್ಬಣಗೊಂಡಿರುವ ರೋಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ನಡೆಸುತ್ತದೆ. ಆದರೆ ದುರ್ಗಮ ಪ್ರದೇಶದಲ್ಲಿರುವ ಹಳ್ಳಿಗಳು ಮತ್ತು ಸೀಮಿತ ಆರೋಗ್ಯ ಮೂಲಸೌಕರ್ಯಗಳು ಸವಾಲುಗಳನ್ನು ಉಲ್ಬಣಗೊಳಿಸುತ್ತಿವೆ. ನಿಗೂಢ ಕಾಯಿಲೆಯಲ್ಲಿ `ಹೆಮರಾಜಿಕ್ ಜ್ವರ'ದ (ರಕ್ತಸ್ರಾವದ ಜತೆ ಜ್ವರ)ರೋಗಲಕ್ಷಣಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಇಂತಹ ರೋಗಲಕ್ಷಣಗಳು ಎಬೋಲ, ಡೆಂಘೆ, ಮಾರ್ಬರ್ಗ್ ಮತ್ತು ಹಳದಿ ಜ್ವರದಂತಹ ಮಾರಣಾಂತಿಕ ವೈರಸ್ಗಳಿಗೆ ಸಂಬಂಧಿಸಿವೆ. ಆದರೆ ಹತ್ತಕ್ಕೂ ಅಧಿಕ ಸ್ಯಾಂಪ್ಗಳನ್ನು ಪರೀಕ್ಷೆ ನಡೆಸಿದ ಬಳಿಕವೂ ಅನಾರೋಗ್ಯದ ನಿಖರವಾದ ಮೂಲ ಮತ್ತು ಸ್ವರೂಪವನ್ನು ವಿಜ್ಞಾನಿಗಳು ದೃಢಪಡಿಸಿಲ್ಲ.
ಕಳೆದ ವರ್ಷ ಕಾಂಗೋ ಗಣರಾಜ್ಯದಲ್ಲಿ `ಎಕ್ಸ್' ಕಾಯಿಲೆ ಉಲ್ಬಣಿಸಿ 143 ಜನರು ಮೃತಪಟ್ಟಿದ್ದರು. ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳು ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ. ಕಳೆದ ದಶಕದಲ್ಲಿ ಈ ರೀತಿಯ ಉಲ್ಬಣ 60%ದಷ್ಟು ಹೆಚ್ಚಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ. ಅರಣ್ಯ ನಾಶ, ಜೀವ ವೈವಿಧ್ಯತೆಯ ನಷ್ಟ, ಪರಿಸರ ನಾಶದಂತಹ ಮಾನವನ ಚಟುವಟಿಕೆಗಳು ಇಂತಹ ಸಮಸ್ಯೆಗೆ ಮೂಲ ಕಾರಣವಾಗಿದ್ದು ಇದು ಜನರನ್ನು ಕಾಡು ಪ್ರಾಣಿಗಳು ಮತ್ತು ಅವುಗಳ ರೋಗಕಾರಕಗಳೊಂದಿಗೆ ನಿಕಟ ಸಂಪರ್ಕಕ್ಕೆ ತರುತ್ತದೆ. ಕಾಂಗೋ ಗಣರಾಜ್ಯದ ಪ್ರಕರಣದಲ್ಲಿ ದುರ್ಬಲ ಆರೋಗ್ಯ ಮೂಲಸೌಕರ್ಯಗಳು ಮತ್ತಷ್ಟು ಹರಡುವಿಕೆಯ ಗಮನಾರ್ಹ ಅಪಾಯವನ್ನುಂಟು ಮಾಡುತ್ತಿದ್ದು ರೋಗ ಉಲ್ಬಣಿಸುವುದನ್ನು ತಡೆಯಲು ತಕ್ಷಣ ಉನ್ನತ ಮಟ್ಟದ ನಿಯಂತ್ರಣ ಕ್ರಮಗಳ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.