ಇಸ್ರೇಲ್-ಹಮಾಸ್ ನಡುವಿನ ಒಪ್ಪಂದಕ್ಕೆ ಜಾಗತಿಕ ಮುಖಂಡರ ಸ್ವಾಗತ
Photo- PTI
ಗಾಝಾ: ಇಸ್ರೇಲ್-ಹಮಾಸ್ ನಡುವೆ ಏರ್ಪಟ್ಟಿರುವ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಅಮೆರಿಕ, ಬ್ರಿಟನ್, ಫ್ರಾನ್ಸ್, ಯುರೋಪಿಯನ್ ಯೂನಿಯನ್, ಚೀನಾ ಮುಂತಾದ ದೇಶಗಳು ಸ್ವಾಗತಿಸಿವೆ.
ಮಾನವೀಯ ಕದನ ವಿರಾಮವನ್ನು ಸ್ವಾಗತಿಸುವುದಾಗಿ ಹಮಾಸ್ ಹೇಳಿದೆ. ಆಕ್ರಮಣಕಾರ ಪಡೆ ಕದನ ವಿರಾಮವನ್ನು ಗೌರವಿಸುವವರೆಗೆ ತಾನೂ ಇದಕ್ಕೆ ಬದ್ಧವಾಗಿದ್ದೇನೆ ಎಂದು ಹಮಾಸ್ ವಕ್ತಾರರು ಹೇಳಿದ್ದಾರೆ. `ಒಪ್ಪಂದವು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಾಗ ಒತ್ತೆಯಾಳುಗಳು ಸುರಕ್ಷಿತವಾಗಿ ತಮ್ಮ ಕುಟುಂಬದೊಂದಿಗೆ ಒಂದಾಗುತ್ತಾರೆ ಎಂಬ ತೃಪ್ತಿಯಿದೆ. ಈ ಒಪ್ಪಂದ ಸಾಧ್ಯವಾಗಲು ಮಧ್ಯಸ್ಥಿಕೆ ವಹಿಸಿದ ಖತರ್ ಮತ್ತು ಈಜಿಪ್ಟ್ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ವಿಸ್ತ್ರತ ಕದನ ವಿರಾಮವನ್ನು ಬೆಂಬಲಿಸುವಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬದ್ಧತೆಯನ್ನು ಪ್ರಶಂಸಿಸುತ್ತೇನೆ ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ನಾಲ್ಕು ದಿನಗಳ ವಿರಾಮವನ್ನು ಘೋಷಿಸಿದ ಬಳಿಕ ಗಾಝಾಕ್ಕೆ ನೆರವು ವಿತರಣೆಯನ್ನು ಹೆಚ್ಚಿಸಲು ಯುರೋಪಿಯನ್ ಕಮಿಷನ್ಗೆ ಸೂಚಿಸಿರುವುದಾಗಿ ಯುರೋಪಿಯನ್ ಯೂನಿಯನ್ ಮುಖ್ಯಸ್ಥೆ ಉರ್ಸುಲಾ ವಾನ್ಡರ್ ಲಿಯೆನ್ ಹೇಳಿದ್ದಾರೆ.
ಆದರೆ ಎಲ್ಲಾ ಒತ್ತೆಯಾಳುಗಳು ಸುರಕ್ಷಿತವಾಗಿ ಮನೆಗೆ ತಲುಪುವ ವರೆಗೆ, ಹಮಾಸ್ ನಿರ್ಮೂಲನೆ ಆಗುವವರೆಗೆ ಮತ್ತು ಗಾಝಾದಿಂದ ಇಸ್ರೇಲ್ಗೆ ಹೊಸ ಬೆದರಿಕೆ ಎದುರಾಗುವುದಿಲ್ಲ ಎಂಬುದನ್ನು ಖಾತರಿಪಡಿಸುವ ವರೆಗೆ ಇಸ್ರೇಲ್ ಸರಕಾರ, ಇಸ್ರೇಲ್ ಭದ್ರತಾ ಪಡೆಯ ಯುದ್ಧ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿಯ ಕಚೇರಿ ಹೇಳಿದೆ.